ಬೆಂಗಳೂರು: ಬಾಬಾ ಬುಡಾನ್ ಗಿರಿಗೆ ಅರ್ಚಕರ ನೇಮಕ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಜಾರಿ ಮತ್ತು ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವರಾದ ಸುನೀಲ್ ಕುಮಾರ್, ಶಶಿಕಲಾ ಜೊಲ್ಲೆ ಮತ್ತು ತಮ್ಮ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು ತಿಳಿಸಿದರು.
ಈ ಸಮಿತಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ನಾರಾಯಣ ಗೌಡ ಹಾಗೂ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಇರುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ನಬಾರ್ಡ್ ಮೂಲಕ ಪುನರ್ಧನ ಪಡೆಯಲು ರೂ. 1550 ಕೋಟಿಗಳಿಗೆ ರಾಜ್ಯ ಸರ್ಕಾರದ ಖಾತರಿ ನೀಡಲು ಅನುಮೋದನೆ ನೀಡಲಾಯಿತು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಲೆಕ್ಕಪರಿಶೋಧನಾಧಿಕಾರಿ ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಸ್.ಬಿ. ಲೋಕೇಶ್ ಮತ್ತು ಟಿ.ಎಸ್. ಜಯರಾಮಯ್ಯ ಸೇವೆಯನ್ನು ಮತ್ತೊಂದು ವರ್ಷ ಮುಂದುವರೆಸಲು ಅನುಮತಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
“ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನೊಳಗೊಂಡಂತೆ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2021″ಕ್ಕೆ ಅನುಮೋದನೆ ನೀಡಲಾಯಿತು. ಒಂದು ಕೇಡರ್ ನಿಂದ ಮತ್ತೊಂದು ಕೇಡರ್ ಗೆ ಪ್ರೊಮೋಷನ್ ನೀಡುವ ಅವಧಿ ಐದು ವರ್ಷದಿಂದ ನಾಲ್ಕು ವರ್ಷಕ್ಕೆ ಇಳಿಕೆ ಮಾಡಲಾಯಿತು. ಹಿಪ್ಪರಗಿ ಬ್ಯಾರೇಜಿನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್, ರಕ್ಷಣಾ ತಡೆಗೋಡೆ (Protection Wall) ನಿರ್ಮಿಸುವ ಕಾಮಗಾರಿಗೆ 28.20 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಮಾಧುಸ್ವಾಮಿ ತಿಳಿಸಿದರು.
ಪೊಲೀಸ್ ಆಧುನೀಕರಣ ಯೋಜನೆಯ ಅಡಿಯಲ್ಲಿ ಬೆಂಗಳೂರು ನಗರಕ್ಕೆ ಅವಶ್ಯವಿರುವ ಡಿಜಿಟಲ್ ರೇಡಿಯೊ ಸಂಪರ್ಕ ವ್ಯವಸ್ಥೆಯ ವಿನ್ಯಾಸ, ಸರಬರಾಜು, ಅಳವಡಿಕೆ ಮತ್ತು ನಿರ್ವಹಣೆ ಕಾರ್ಯವನ್ನು ಒಟ್ಟು 14.65 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ದೊರೆಯಿತು.
ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದಲ್ಲಿ ಹರಿಯುವ ನದಿಗಳಿಗೆ “ಖಾರ್ ಲ್ಯಾಂಡ್ ಯೋಜನೆ”ಯ ರೂ. 1500,00 ಕೋಟಿ ಮೊತ್ತದ ಮಾಸ್ಟರ್ ಪ್ಲಾನ್ಗೆ ತಾತ್ವಿಕ ಒಪ್ಪಿಗೆ ದೊರೆತಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ನದಿಗಳಿಗೆ ಸಂಬಂಧಿಸಿದ ರೂ. 300 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಖಾನಾಪುರ ತಾಳಗುಪ್ಪಾ ರಾಜ್ಯ ಹೆದ್ದಾರಿ-93ರ ಚೈನೇಜ್ 145.00 ರಿಂದ 150.00 ಕಿ.ಮೀ.ನಲ್ಲಿ (ಕಿ.ಮೀ. 147.40 ರಿಂದ ಕಿ.ಮೀ. 149.80 ರವರೆಗೆ) ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ರೂ. 15 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆಯಿತು.
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನ ಸವದತ್ತಿ ಗ್ರಾಮದಲ್ಲಿನ ಒಟ್ಟು 32 ಎಕರೆ ಜಮೀನನ್ನು ಪವನ ವಿದ್ಯುತ್ (Wind power) ಯೋಜನೆಗಾಗಿ ಮೆ: ರೋಹನ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು.
ಉಡುಪಿ ಜಿಲ್ಲೆಯ ನೂತನ ಹೆಬ್ರಿ ತಾಲ್ಲೂಕಿಗೆ ಸೇರ್ಪಡೆಯಾಗಿರುವ ಕಾರ್ಕಳ ತಾಲ್ಲೂಕಿನ ಅಜೆಕಾರು ಹೋಬಳಿಯ 12 ಗ್ರಾಮಗಳು ಹಾಗೂ ಕುಂದಾಪುರ ಹೋಬಳಿಯ 4 ಗ್ರಾಮಗಳನ್ನು ಸೇರಿಸಿ ಹೊಸದಾಗಿ ಹೆಬ್ರಿ ಹೋಬಳಿಯನ್ನು ರಚನೆಗೆ ಅನುಮೋದನೆ ನೀಡಲಾಯಿತು. ಸಾಮಾಜಿಕ ಭದ್ರತೆ ಯೋಜನೆಯಡಿ ಸಂಧ್ಯಾ ಸುರಕ್ಷಾ ಯೋಜನೆಯಂತ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇಂದಿರಾಗಾಂಧಿ ವೃದ್ಧಾಪ್ಯ ವೇತನ ಯೋಜನೆಯಡಿ ನೀಡುತ್ತಿರುವ ಮಾಸಿಕ ಪಿಂಚಣಿ ಮೊತ್ತವನ್ನು 1000 ದಿಂದ ವರೆಗೆ 1200 ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿಲಾಗಿತ್ತು. ಇದೀಗ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.