ವಿದ್ಯಾರ್ಥಿಗಳಿಗೆ ರಾಜಕೀಯ ವ್ಯವಸ್ಥೆಯ ಅರಿವು ಮುಖ್ಯ: ಸಚಿವ ಸಂತೋಷ್ ಲಾಡ್

Prasthutha|

ಬೆಳಗಾವಿ: ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನಲ್ಲೂ ಮುಖ್ಯ. ಶಾಲಾ ಶಿಕ್ಷಣದೊಂದಿಗೆ ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ಅರ್ಥೈಸಿಕೊಳ್ಳಬೇಕು. ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

- Advertisement -

ವಿಧಾನಮಂಡಲ ಅಧಿವೇಶನ ವೀಕ್ಷಣೆಗಾಗಿ ತಮ್ಮ ಮತಕ್ಷೇತ್ರ ಕಲಘಟಗಿಯ ಸರ್ಕಾರಿ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎರಡು ಸದನಗಳ ಕಾರ್ಯಕಲಾಪ ಪರಿಚಯಿಸಿ, ವಿಧಾನಮಂಡಲ ಅಧಿವೇಶನ ಮತ್ತು ಸುವರ್ಣಸೌಧ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ತಮ್ಮ ಕಚೇರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮನುಷ್ಯ ರಾಜಕೀಯ ಜೀವಿ. ಬಲಿಷ್ಠ ಭಾರತ ನಿರ್ಮಾಣ ಆಗಬೇಕಾದರೆ ಇಂದಿನ ಯುವಸಮುದಾಯ ಪ್ರಾಮಾಣಿಕವಾದ ಸಮಾಜ ಸೇವೆಯ ದೀಕ್ಷೆ ತೊಡಬೇಕು. ರಾಜಕೀಯ ಪಕ್ಷ, ಆಡಳಿತ, ಸರ್ಕಾರ, ಮಂತ್ರಿಮಂಡಲ, ಅಧಿಕಾರಶಾಹಿ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರು ಮತದಾನ, ಚುನಾವಣೆ ಮುಂತಾದ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಜನಪ್ರತಿನಿಧಿ, ಉತ್ತಮ ಸರ್ಕಾರ ಹೊಂದಲು, ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Join Whatsapp