ಟಿ20 ವಿಶ್ವಕಪ್‌ | ಸ್ಟೋಯ್ನಿಸ್‌ ಅಬ್ಬರಕ್ಕೆ ಶ್ರೀಲಂಕಾ ನಿರುತ್ತರ, ಆಸ್ಟ್ರೇಲಿಯಾಗೆ 7 ವಿಕೆಟ್‌ ಜಯ

Prasthutha|

ಪರ್ತ್‌: ಮಾರ್ಕಸ್ ಸ್ಟೋಯ್ನಿಸ್‌ ಗಳಿಸಿದ ಅಬ್ಬರದ ಅರ್ಧಶತಕದ (18 ಎಸೆತಗಳಲ್ಲಿ 59 ರನ್‌) ನೆರವಿನಿಂದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಟಿ20 ವಿಶ್ವಕಪ್‌ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಳು ವಿಕೆಟ್‌ ಅಂತರದಲ್ಲಿ ಮಣಿಸಿತು.

- Advertisement -

ಪರ್ತ್‌ನಲ್ಲಿ ಟಾಸ್‌ ಗೆದ್ದ ಆಸೀಸ್‌, ಏಷ್ಯಾ ಕಪ್‌ ಚಾಂಪಿಯನ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಪಾತುಮ್‌ ನಿಸ್ಸಾಂಕ (40 ರನ್‌) ಮತ್ತು ಚರಿತ್‌ ಅಸಲಂಕ (38 ರನ್‌) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಂಕಾ, 6 ವಿಕೆಟ್‌ ನಷ್ಟದಲ್ಲಿ 157 ರನ್‌ ಗಳಿಸಿತ್ತು.

ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಆಸೀಸ್‌, 16.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಗೆಲುವಿನ ನಗೆ ಬೀರಿತು. ಲಂಕಾ ಬೌಲರ್‌ಗಳನು ಮನಬಂದಂತೆ ದಂಡಿಸಿದ ಸ್ಟೊಯ್ನಿಸ್‌, ಕೇವಲ 17 ಎಸೆತಗಳಲ್ಲಿ ಮಿಂಚಿನ ಅರ್ಧಶತಕ ಗಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ದಾಖಲಾದ ವೇಗದ ಅರ್ಧಶತಕ ಎಂಬ ದಾಖಲೆಯನ್ನು, ಈ ಮೂಲಕ ಸ್ಟೊಯ್ನಿಸ್‌ ತಮ್ಮದಾಗಿಸಿಕೊಂಡರು. ಅಂತಿಮವಾಗಿ 18 ಎಸೆತಗಳಲ್ಲಿ 6 ಸಿಕ್ಸರ್‌ ಮತ್ತು 4 ಬೌಂಡರಿಗಳ ನೆರವಿನೊಂದಿಗೆ 59 ರನ್‌ಗಳಿ ಅಜೇಯರಾಗುಳಿದರು. ತಾಳ್ಮೆಯ ಆಟವಾಡಿದ  ನಾಯಕ ಆರನ್ ಫಿಂಚ್, 42 ಎಸೆತಗಳಲ್ಲಿ  ಔಟಾಗದೆ 31 ರನ್‌ಗಳಿಸಿದರು.

- Advertisement -

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ದಾಖಲೆ ಭಾರತದ ಯುವರಾಜ್‌ ಸಿಂಗ್‌ ಹೆಸರಿನಲ್ಲಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವಿ, 12 ಎಸೆತಗಳಲ್ಲಿ 58 ಬಾರಿಸಿದ್ದರು. ಈ ಪಂದ್ಯದಲ್ಲಿ  ಸ್ಟುವರ್ಟ್‌ ಬ್ರಾಡ್‌ ಎಸೆದ ಒಂದೇ ಓವರ್‌ನ ಎಲ್ಲಾ 6 ಎಸೆತಗಳನ್ನು ಯುವರಾಜ್‌ ಸಿಕ್ಸರ್‌ಗೆ ಅಟ್ಟಿದ್ದರು.

ಆಸ್ಟ್ರೇಲಿಯಾಗೆ ಉತ್ತಮ ಆರಂಭ ಒದಗಿಸುವಲ್ಲಿ ವಾರ್ನರ್‌ ಮತ್ತೊಮ್ಮೆ ವಿಫಲರಾದರು. ಕಳೆದ ಪಂದ್ಯದಲ್ಲಿ 5 ರನ್‌ಗಳಿಸಿದ್ದ ಎಡಗೈ ಬ್ಯಾಟರ್, ಮಂಗಳವಾರ 11 ರನ್‌ಗಳಿಸಿ, ಆಫ್ ಸ್ಪಿನ್ನರ್ ಮಹೇಶ್ ತೀಕ್ಷಣಗೆ ವಿಕೆಟ್‌ ಒಪ್ಪಿಸಿದರು. ಮ್ಯಾಕ್ಸ್‌ವೆಲ್‌ 12 ಎಸೆತಗಳಲ್ಲಿ 23 ರನ್‌ಗಳಿಸಿದರೆ, ಮಿಚೆಲ್‌ ಮಾರ್ಷ್‌ 18 ರನ್‌ಗಳಿಸಿದರು.

ಸೂಪರ್ 12ರ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಟಿ20 ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ತಂಡಕ್ಕೆ ಶರಣಾಗಿತ್ತು.

ಸಂಕ್ಷಿಪ್ತ ಸ್ಕೋರ್‌:

ಶ್ರೀಲಂಕಾ: 20 ಓವರ್‌ಗಳಲ್ಲಿ 157/6 (ಪಾತುಮ್ ನಿಸ್ಸಾಂಕ 40, ಚರಿತ್ ಅಸಲಂಕಾ ಔಟಾಗದೆ 38).

ಆಸ್ಟ್ರೇಲಿಯಾ:  16.3 ಓವರ್‌ಗಳಲ್ಲಿ 158/3 ( ಮಾರ್ಕಸ್ ಸ್ಟೊಯ್ನಿಸ್‌ 59, ಆರನ್ ಫಿಂಚ್, 31)

Join Whatsapp