18 ವರ್ಷದವರೊಳಗಿನ ಮಹಿಳೆಯರ ಫಿಬಾ ಏಷ್ಯನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸೀಸ್ ವನಿತೆಯರು, 81-55 ಅಂಕಗಳ ಅಂತರದಲ್ಲಿ ಚೀನಾ ತಂಡದ ಸವಾಲನ್ನು ಮೆಟ್ಟಿನಿಂತರು.
ಪಂದ್ಯದ ಮೂರೂ ಅವಧಿಯಲ್ಲೂ ಆಸ್ಟ್ರೇಲಿಯಾ ಪಾರಮ್ಯ ಮೆರೆಯಿತು. ಇಸ್ಲಾ ಜುಫರ್‌ಮ್ಯಾನ್ಸ್, ಗಾರ್ಡ್ ಐಸೊಬೆಲ್ ಬೊರ್ಲೇಸ್ ಹಾಗೂ ಮುಂಚೂಣಿ ಆಟಗಾರ್ತಿ ನ್ಯಾಡಿವ್ ಪೂಚ್ ಮತ್ತು ಪಾಯಿಂಟ್ ಗಾರ್ಡ್ ಡಲ್ಲಾಸ್ ಲೌರಿಡ್ಜ್ ಅವರ ಅಬ್ಬರದ ಆಟದ ಎದುರು ಚೀನಾ ಮಂಕಾಯಿತು.
ಮುಂಚೂಣಿ ಮತ್ತು ರಕ್ಷಣಾ ವಿಭಾಗಗಳಲ್ಲಿ ಮಿಂಚಿದ ಇಸ್ಲಾ ಜುಫರ್‌ಮ್ಯಾನ್ಸ್ ಒಟ್ಟು 26 ಅಂಕಗಳನ್ನು ಕಲೆಹಾಕಿದರು. ಆ ಮೂಲಕ ಪಂದ್ಯದ ಮೌಲ್ಯಯುತ ಆಟಗಾರ್ತಿ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.
ಜಪಾನ್ ಮೂರನೇ ಮತ್ತು ಚೈನೀಸ್ ತೈಪೆ ನಾಲ್ಕನೇ ಸ್ಥಾನ ಪಡೆಯಿತು. ಈ 4 ತಂಡಗಳು 2023ರ ಜುಲೈನಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಅಂಡರ್- 19 ಮಹಿಳೆಯರ ಫಿಬಾ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ನೇರ ಅರ್ಹತೆ ಪಡೆಯಿತು. ಮತ್ತೊಂದೆಡೆ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲುವನ್ನು ಕಾಣದೆ ಭಾರತ, ಎಂಟನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದೆ.
ಸೆಮಿಫೈನಲ್‌ನಲ್ಲಿ ಚೀನಾ, ಬಲಿಷ್ಠ ಜಪಾನ್ ತಂಡವನ್ನು ಮತ್ತು ಆಸ್ಟ್ರೇಲಿಯಾ, ಚೈನೀಸ್‌ತೈಪೆಯನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.