ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ

Prasthutha|

ಮಂಡ್ಯ: ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಜಿಲ್ಲೆಯ ತಂಗಳಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

- Advertisement -

ಕಳೆದ ಕೆಲವು ದಿನಗಳ ಹಿಂದೆ ಮನೆಯಿಂದ ಶಾಲೆಗೆ ಮಗನನ್ನು ಬಿಟ್ಟು ಬಂದಿದ್ದ ತಂದೆ, ಗಣೇಶನ ಹಬ್ಬಕ್ಕೆಂದು ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ವಿದ್ಯಾರ್ಥಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.20 ದಿನಗಳ ಹಿಂದೆ ಈರೇಗೌಡ ಎಂಬುವರು ತಮ್ಮ ಮಗ 9ನೇ ತರಗತಿ ಓದುತ್ತಿದ್ದ ಕಿಶೋರ್​ನನ್ನು ಶಾಲೆಗೆ ಬಿಟ್ಟು ಬಂದಿದ್ದರು. ಬಳಿಕ ಕಳೆದ 3 ದಿನಗಳ ಹಿಂದೆ ಗಣಪತಿ ನಿಮಜ್ಜನದಂದು ಮಗನನ್ನು ಮನೆಗೆ ಕರೆದುಕೊಂಡು ಬರಲು ಹೋದಾಗ, ಶಾಲೆಯ ಆಡಳಿತ ಮಂಡಳಿ ನಿಮ್ಮ ಮಗ ಸುಮಾರು 15 ದಿನಗಳಿಂದ ಶಾಲೆಗೆ ಬಂದಿಲ್ಲ. ಆತ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಬೇಜಾಬ್ದಾರಿತನದ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

- Advertisement -

ಇದರಿಂದ ಗಲಿಬಿಲಿಗೊಂಡ ಪೋಷಕರು ಶಾಲೆಯ ಸಿಸಿಟಿವಿ ಪರಿಶೀಲಿಸಿದ್ದು, ಸಿಸಿಟಿವಿ ದೃಶ್ಯದಲ್ಲಿ ಬಾಲಕ ಶಾಲೆಗೆ ಬಂದಿರುವ ದೃಶ್ಯ ಮಾತ್ರ ಕಂಡುಬಂದಿದೆ. ಹೊರಗೆ ಹೋಗುವ ಯಾವುದೇ ದೃಶ್ಯಗಳು ಸಿಕ್ಕಿಲ್ಲ. ಹೀಗಾಗಿ ಬಾಲಕ ನಾಪತ್ತೆಯಾಗಿರುವುದು ಪೋಷಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಳೆದ 15 ದಿನಗಳಿಂದ ಬಾಲಕ ಶಾಲೆಗೆ ಬರದಿದ್ದರೂ, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪೋಷಕರಲ್ಲಿ ವಿಚಾರಿಸಿಲ್ಲವಂತೆ. ಇದರಿಂದಾಗಿ ಪೋಷಕರು ಕಂಗಾಲಾಗಿದ್ದು, ಮಗನನ್ನು ಹುಡುಕಿ ಕೊಡುವಂತೆ ಕಣ್ಣೀರಿಡುತ್ತಿದ್ದಾರೆ.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡ್ಯ ಜಿಲ್ಲಾಡಳಿತ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದೆ. ಹಾಗೂ ಡಿಸಿ ಅಶ್ವತಿಯವರು ಈ ಪ್ರಕರಣವನ್ನು ಪೋಲಿಸ್ ಇಲಾಖೆಗೆ ವಹಿಸಿದ್ದು, ಶೀಘ್ರವಾಗಿ ಬಾಲಕನನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ.

ಇನ್ನು, ವಿದ್ಯಾರ್ಥಿಯ ಕೊಠಡಿಯಲ್ಲಿ ಬಾಲಕ ಬರೆದಿದ್ದಾನೆ ಎನ್ನುವ ಪತ್ರವು ಸಿಕ್ಕಿದ್ದು, ಅದರಲ್ಲಿ ಆತ ಈ ಶಾಲೆಯಲ್ಲಿ ನನಗೆ ಓದಲು ಇಷ್ಟವಿಲ್ಲ. ದಯವಿಟ್ಟು ನನ್ನನ್ನು ಹುಡುಕಬೇಡಿ ಅಪ್ಪಾ ಚಿಕ್ಕಪ್ಪ ಎಂದು ಬರೆದಿದ್ದಾನೆ. ಆದರೆ ಪೋಷಕರು ಈ ಪತ್ರದಲ್ಲಿರುವ ಅಕ್ಷರವು ನನ್ನ ಮಗನದಲ್ಲ ಎಂದು ಹೇಳಿದ್ದಾರೆ.

Join Whatsapp