ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಹಾರಲು ಯತ್ನ: ಇಬ್ಬರ ಬಂಧನ

Prasthutha|

ಬೆಂಗಳೂರು: ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾರ್ಥಿ ವೀಸಾದಡಿ ವಿದೇಶಕ್ಕೆ ಹಾರಲು ಮುಂದಾಗಿದ್ದ ಆರೋಪಿ ಹಾಗೂ ನಕಲಿ ಅಂಕ ಪಟ್ಟಿ ಸೃಷ್ಟಿಸುತ್ತಿದ್ದ ಏಜೆಂಟ್ ನನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement -

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿ ದೇವೆಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಕೇರಳ ಮೂಲದ ವಿದ್ಯಾರ್ಥಿ ಸೋಜು ಹಾಗೂ ನಕಲಿ ಅಂಕಪಟ್ಟಿ ಜಾಲದ ಪ್ರಮುಖ ಆರೋಪಿ ಅನುರಾಗ್ ಎಂಬವರನ್ನು ಏರ್ಪೋರ್ಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಕಲಿ ಅಂಕಪಟ್ಟಿ ಜಾಲದಲ್ಲಿ ತೊಡಗಿದ್ದ ಇನ್ನಿತರ ಆರೋಪಿಗಳ ಬಂಧನಕ್ಕಾಗಿ ಕೇರಳಕ್ಕೆ ವಿಶೇಷ ತಂಡ ಕಳುಹಿಸಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

- Advertisement -

ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಸೋಜು ಯುಕೆಗೆ ಹೋಗಿ ಕೆಲಸ ಮಾಡಲು ಮುಂದಾಗಿದ್ದ. ವೀಸಾ ಇಲ್ಲದ ಕಾರಣ ಸ್ಟೂಡೆಂಟ್ ವೀಸಾ ಸೋಗಿನಲ್ಲಿ ವಿದೇಶಕ್ಕೆ ಹೋಗಬೇಕು ಎಂದು ಕನಸು ಕಂಡಿದ್ದ. ಇದರಂತೆ ನಕಲಿ ಅಂಕ ಪಟ್ಟಿಯೊಂದಿಗೆ ಡಿ.17ರಂದು ಸೋಜು ಬೆಂಗಳೂರು ಏರ್ ಪೋರ್ಟ್ ಮೂಲಕ ಬ್ರಿಟಿಷ್ ಏರ್ ವೇಸ್ ವಿಮಾನಕ್ಕೆ ಯುಕೆ ಹೋಗಲು ಪ್ರಯಾಣ ಬೆಳೆಸಿದ್ದ.
ದಾಖಲಾತಿ ತಪಾಸಣೆ ವೇಳೆ ಸೋಜು ಬಳಿಯಿದ್ದ ಮಾರ್ಕ್ಸ್ ಕಾರ್ಡ್ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಕಲಿ ಮಾರ್ಕ್ಸ್ ಕಾರ್ಡ್ ಬಗ್ಗೆ ಸೋಜು ಬಾಯ್ಬಿಟ್ಟಿದ್ದ.

ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ವಿದ್ಯಾರ್ಥಿಯನ್ನು ಬಂಧಿಸಿ ಅಂಕಪಟ್ಟಿ ತಪಾಸಣೆ ನಡೆಸಿದಾಗ ಕಲಬುರಗಿ ವಿಶ್ವವಿದ್ಯಾಲಯ ಪದವಿ ಅಂಕಪಟ್ಟಿ ಫೇಕ್ ಮಾಡಿಕೊಂಡಿರುವುದು ತಿಳಿದು ಬಂದಿದೆ.

ವಿಚಾರಣೆ ವೇಳೆ ಈತ ಮಾಹಿತಿ ನೀಡಿದ ಮೇರೆಗೆ ನಕಲಿ ಅಂಕಪಟ್ಟಿ ಏಜೆಂಟ್ ಆಗಿದ್ದ ಅನುರಾಗ್ ನನ್ನು ಬಂಧಿಸಲಾಗಿದೆ. ವಂಚನೆ ಜಾಲದಲ್ಲಿ ಹಲವು ಮಂದಿ ಭಾಗಿಯಾಗಿದ್ದು, ಶೋಧ ಕಾರ್ಯ ಮುಂದುವರೆಸಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

ಟ್ರೂ ವೇ ಗ್ಲೋಬಲ್ ಎಜುಕೇಷನ್ ಇನ್ ಸ್ಟಿಟ್ಯೂಟ್ ಹೆಸರಿನಲ್ಲಿ ವ್ಯವಹಾರ: ಹಲವು ವರ್ಷಗಳಿಂದ ಅನುರಾಗ್ ನಕಲಿ ಅಂಕಪಟ್ಟಿ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಹಣ ನೀಡಿದರೆ ನಕಲಿ ಅಂಕಪಟ್ಟಿ ಸೃಷ್ಟಿಸಿ ಕೊಡುವ ಏಜೆಂಟ್ ಆಗಿ ಗುರುತಿಸಿಕೊಂಡಿದ್ದ. ಇದಕ್ಕಾಗಿಯೇ ‘ಟ್ರೂ ವೇ ಗ್ಲೋಬಲ್ ಎಜುಕೇಷನ್ ಇನ್ ಸ್ಟಿಟ್ಯೂಟ್’ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದ ಎನ್ನಲಾಗ್ತಿದೆ.
ಇಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗಳಿಂದ ಸಾವಿರಾರು ರೂ.ಪಡೆದು ನಕಲಿ ಅಂಕ ಪಟ್ಟಿ ಮಾಡಿಕೊಡುತ್ತಿದ್ದ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತ್ತಾರು ವಿದ್ಯಾರ್ಥಿಗಳಿಗೆ ನಕಲಿ ಅಂಕ ಪಟ್ಟಿ ನೀಡಿರುವುದು ಬೆಳಕಿಗೆ ಬಂದಿದೆ. ಅಂಕಪಟ್ಟಿಯಲ್ಲಿ ಬಳಸುವ ಹಾಲೋಗ್ರಾಮ್ ಸಹ ಅಸಲಿ ಹಾಲೋಗ್ರಾಮ್ ನಂತೆ ಹೋಲುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

Join Whatsapp