ಬಡ ವ್ಯಾಪಾರಿಗಳ ಮೇಲೆ ದಾಳಿ: ಅಮಾನವೀಯ, ಸಂವಿಧಾನಬಾಹಿರ ನಡೆ

Prasthutha: May 30, 2022
✍️ವಿನಯ್ ಶ್ರೀನಿವಾಸ್

ಕಳೆದ ನಾಲ್ಕೈದು ವರ್ಷಗಳಿಂದ ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನಿರುದ್ಯೋಗದ ಸಮಸ್ಯೆ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಿಲ್ಲ. ನಿರುದ್ಯೋಗದ ಸಮಸ್ಯೆ ಇನ್ನಷ್ಟು ಹೆಚ್ಚಾಗದಿರುವ ಕಾರಣ ಭಾರತದ ಸಣ್ಣ ಅಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳು ಎಂದರೆ ತಪ್ಪಾಗಲಾರದು. ಸರ್ಕಾರದಿಂದ ಯಾವುದೇ ನೆರವಿಲ್ಲದೆ ತಮ್ಮ ಬೆವರು, ರಕ್ತ ಸುರಿಸಿ ಅವರ ಜೀವನೋಪಾಯವನ್ನು ಅವರೇ ಕಂಡುಕೊಂಡು, ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಉತ್ತಮ ಮತ್ತು ಗುಣಮಟ್ಟದ ವಸ್ತುಗಳನ್ನು ಹಾಗೂ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದಾರೆ.


ಸಮಾಜಕ್ಕೆ ಅನುಕೂಲ ಮಾಡುತ್ತಿರುವ ಸಣ್ಣ ಅಂಗಡಿ ಮಾಲೀಕರಿಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಡಿಮಾನಿಟೈಸೇಷನ್, ಜಿಎಸ್ಟಿ, ಆನ್ ಲೈನ್ ರಿಟೇಲ್ ಹಾಗೂ ಕೋವಿಡ್ ಪಿಡುಗಿನಿಂದ ಬಹಳಷ್ಟು ಸಮಸ್ಯೆಯಾಗಿವೆ. ಹಲವಾರು ವ್ಯಾಪಾರಗಳು ಮುಚ್ಚಿ ಹೋಗಿವೆ. ಬಹಳಷ್ಟು ಬೀದಿ ವ್ಯಾಪಾರಿಗಳು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈಗ ಅದರ ಜೊತೆಗೆ ಹಿಂದುತ್ವ ಸಂಘಟನೆಗಳಿಂದ ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದಾಳಿ ಸಹ ಅವರ ಬದುಕಿನ ಮೇಲೆ ಪ್ರಹಾರ ನಡೆಸಿದೆ.
ಕಳೆದ ತಿಂಗಳು ಧಾರವಾಡ ನಗರದಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ನಬಿ ಸಾಬ್ ಎಂಬ ವೃದ್ಧ ವ್ಯಾಪಾರಿಯ ಮೇಲೆ ದೌರ್ಜನ್ಯ ಎಸಗಿ, ಅವರು ಮಾರುತ್ತಿದ್ದ ಹಣ್ಣುಗಳನ್ನೆಲ್ಲ ಶ್ರೀರಾಮ ಸೇನೆಯ ಗೂಂಡಾಗಳು ನಾಶ ಪಡಿಸಿದರು. ಈ ಅಮಾನುಷ ಕೃತ್ಯಕ್ಕೆ ಕರ್ನಾಟಕದಾದ್ಯಂತ ಖಂಡನೆ ವ್ಯಕ್ತವಾಯಿತು. ಆದರೆ ಇದು ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಮೊದಲನೇ ದಾಳಿಯಲ್ಲ. ಮುಸ್ಲಿಮ್ ವ್ಯಾಪಾರಿಗಳ ಮೇಲೆ ದಾಳಿಗಳು, ಆರ್ಥಿಕ ಬಹಿಷ್ಕಾರ ಕರೆಗಳು ನಡೆಯುತ್ತಲೇ ಇವೆ. ಈಗ ಇದು ನಮ್ಮ ದೇಶದಲ್ಲಿ ಸಾಮಾನ್ಯವೆಂಬಂತಾಗಿದೆ. ಮುಸ್ಲಿಮ್ ವ್ಯಾಪಾರಿಗಳ ಮೇಲಿನ ದ್ವೇಷದಿಂದಾಗಿ ಇತರ ಅನೇಕ ಹಿಂದೂ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ. (ಜಹಾಂಗೀರ್ ಪುರಿ ಹಾಗೂ ಖಾರ್ಗೊನ್ ನಲ್ಲಿ ಎರಡೂ ಧರ್ಮಗಳ ವ್ಯಾಪಾರಿಗಳು ಸಂತ್ರಸ್ತರಾಗಿದ್ದಾರೆ). ಮಾರುಕಟ್ಟೆಗಳಲ್ಲಿ ಸಾಮರಸ್ಯ ಕೆಡಿಸುವ ಪ್ರಯತ್ನ ನಡೆಯುತ್ತಿದೆ.
ಆದರೆ ಈ ಘಟನೆಗಳು ಹೊಸದಲ್ಲ. ಕಳೆದ ಕೆಲವು ವರ್ಷಗಳಿಂದಲೂ ನಡೆದುಕೊಂಡು ಬಂದು, ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.


ಕೆಲವು ಉದಾಹರಣೆಗಳೆಂದರೆ –
2017 – ಕರ್ನಾಟಕದ ಯಾದಗಿರಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೆಲಂಗಾಣದ ಬಿಜೆಪಿ ಶಾಸಕ ರಾಜಾಸಿಂಗ್ ಮುಸ್ಲಿಮ್ ವ್ಯಾಪಾರಿಗಳ ಬಹಿಷ್ಕಾರಕ್ಕೆ ಸಾರ್ವಜನಿಕವಾಗಿ ಕರೆ ನೀಡಿರುವುದು.
ಏಪ್ರಿಲ್, 2020 – ಉತ್ತರ ಪ್ರದೇಶದ ಮೀರತ್ನಲ್ಲಿ ಮುಸ್ಲಿಮ್ ತರಕಾರಿ ವ್ಯಾಪಾರಿಗಳು ಕೊರೋನಾ ಹಬ್ಬಿಸುತ್ತಾರೆಂದು ಸುಳ್ಳು ಹಬ್ಬಿಸಿ, ಕೆಲವು ಕಿಡಿಗೇಡಿಗಳು ಅವರನ್ನು ವ್ಯಾಪಾರ ಮಾಡದಂತೆ ತಡೆಒಡ್ಡಿರುವುದು
ಏಪ್ರಿಲ್, 2020 – ಬೆಂಗಳೂರಿನಲ್ಲಿ ಮುಸ್ಲಿಮ್ ದ್ರಾಕ್ಷಿ ವ್ಯಾಪಾರಿಯೊಬ್ಬರು ದ್ರಾಕ್ಷಿ ಮೇಲೆ ಉಗುಳಿದರು ಎಂಬ ಸುಳ್ಳು ಸುದ್ದಿ ಹಬ್ಬಿಸಿ ವಿಡಿಯೋ ವೈರಲ್ ಮಾಡಲಾಯಿತು. ವಾಸ್ತವದಲ್ಲಿ ಅವರು ವ್ಯಾಪಾರಿಯೇ ಆಗಿರಲಿಲ್ಲ, ಅವರು ದ್ರಾಕ್ಷಿ ಮೇಲೆ ಉಗಿದಿರಲೇ ಇಲ್ಲ.
ಆಗಸ್ಟ್ 2021 – ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮೆಹಂದಿ ಹಾಕುತ್ತಿರುವ ಮುಸ್ಲಿಮ್ ಬೀದಿ ವ್ಯಾಪಾರಿಗಳನ್ನು ಕ್ರಾಂತಿ ಸೇನಾ ಎಂಬ ಗೂಂಡಾಗಳ ಗುಂಪು ಹೊಡೆದು ವ್ಯಾಪಾರ ಮಾಡದಂತೆ ಒತ್ತಡ ಹಾಕಿತ್ತು.
ಆಗಸ್ಟ್ 2021 – ಮಧ್ಯಪ್ರದೇಶದ ಇಂದೋರ್ನಲ್ಲಿ ಬಳೆ ಮಾರುತ್ತಿದ್ದ ಮುಸ್ಲಿಮ್ ವ್ಯಾಪಾರಿಯನ್ನು, ಚೂಡಿ ಜಿಹಾದ್ ಮಾಡುತ್ತಿದ್ದಾರೆಂದು ಇಲ್ಲ ಸಲ್ಲದ ಆಪಾದನೆ ಮಾಡಿ, ಥಳಿಸಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು.
ಏಪ್ರಿಲ್ 2022 – ಉತ್ತರ ಪ್ರದೇಶದ ಮೀರತ್ ನಲ್ಲಿ ನವರಾತ್ರಿಯಲ್ಲಿ ಮಾಂಸ ಮಾರುತ್ತಿದ್ದಾರೆಂದು (ಮಾರಾಟ ಮಾಡಬಾರದು ಎಂಬ ನಿಯಮವೇನಿಲ್ಲ) ಸಂಗೀತ್ ಸೋಮ್ ಸೇನಾದ ಕಿಡಿಗೇಡಿಗಳು ಅಲ್ಲಿನ ಬೀದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದರು.
ಏಪ್ರಿಲ್ 2022 – ಕರ್ನಾಟಕದ ಭದ್ರಾವತಿಯಲ್ಲಿ ಬಜರಂಗ ದಳದ ಕೆಲವರು ಹಲಾಲ್ ಮಾಂಸ ಮಾರುತ್ತಿದ್ದಾರೆಂದು ಆರೋಪಿಸಿ ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ಮಾಡಿ ಅವರನ್ನು ಥಳಿಸಿದ್ದರು.


ಇದು ಖಾಸಗಿ ವ್ಯಕ್ತಿಗಳು ಮಾಡುತ್ತಿರುವ ದೌರ್ಜನ್ಯ ಹಾಗೂ ತಾರತಮ್ಯವಾದರೆ ಕೆಲವು ಕಡೆ ಸರ್ಕಾರಗಳಿಂದಲೇ ಮುಸ್ಲಿಮ್ ವ್ಯಾಪಾರಿಗಳ ವಿರುದ್ಧ ದೌರ್ಜನ್ಯ ವೆಸಗಲಾಗುತ್ತಿದೆ. ಕಳೆದ ವರ್ಷ ಗುಜರಾತ್ನಲ್ಲಿ ಅನೇಕ ನಗರಪಾಲಿಕೆಗಳು ಮಾಂಸದ ತಿಂಡಿ ತಿನಿಸುಗಳನ್ನು ಮಾರುತ್ತಿದ್ದ ಬೀದಿ ವ್ಯಾಪಾರಿಗಳನ್ನು ಅವರು ಅಕ್ರಮವಾಗಿ ಜಾಗ ಉಪಯೋಗಿಸುತ್ತಾರೆಂದು ಎತ್ತಂಗಡಿ ಮಾಡಿದ್ದವು. ಇದರ ವಿರುದ್ಧ ವ್ಯಾಪಾರಿಗಳು ಗುಜರಾತ್ ಉಚ್ಚ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯವು ಅಲ್ಲಿನ ಮಹಾನಗರ ಪಾಲಿಕೆಗೆ ಇನ್ನಿತರರು ಏನು ತಿನ್ನುತ್ತಾರೆಂದು ನಗರಪಾಲಿಕೆ ತೀರ್ಮಾನಿಸಲು ಆಗುವುದಿಲ್ಲ, ಈ ವ್ಯಾಪಾರಿಗಳು ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆಂದು ನೀವು ಕ್ರಮ ತೆಗೆದುಕೊಳ್ಳಲಿಲ್ಲ, ಬದಲಿಗೆ ಅವರು ಮುಸ್ಲಿಂ ವ್ಯಾಪಾರಿಗಳಾಗಿದ್ದರಿಂದ ನೀವು ಕ್ರಮ ತೆಗೆದುಕೊಂಡಿದ್ದೀರೆಂದು ತರಾಟೆಗೆ ತೆಗೆದುಕೊಂಡಿತು. ಇದರ ನಂತರವೇ ಮಹಾನಗರಪಾಲಿಕೆಯು ಮಾಂಸದ ತಿಂಡಿಗಳನ್ನು ಮಾರುತ್ತಿದ್ದ ಬೀದಿ ವ್ಯಾಪಾರಿಗಳ ಮೇಲೆ ನಿಷೇಧವನ್ನು ಹಿಂಪಡೆಯಿತು.


ಅದೇ ರೀತಿ ಕಳೆದ ತಿಂಗಳು ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ಅನೇಕ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಸಣ್ಣ ಅಂಗಡಿಗಳನ್ನು ಧ್ವಂಸ ಮಾಡಲಾಯಿತು. ಅದೇ ಪ್ರದೇಶದಲ್ಲಿ ರಾಮ್ ನವಮಿಗೆ ಬಂದೂಕು, ಕತ್ತಿಗಳನ್ನು ಹಿಡಿದು ‘ಜಬ್ ಮುಲ್ಲೆ ಕಾಟೆ ಜಾಯೆಂಗೆ ರಾಮ್ ರಾಮ್ ಚಿಲ್ಲಾಯೆಂಗೆ‘ ಎಂದು ಮುಸ್ಲಿಮರನ್ನು ಅವಮಾನಿಸುವ ಬೆದರಿಸುವ ಘೋಷಣೆಗಳು ಕೂಗಲಾದವು. ಇದಾದ ನಂತರ ಎರಡು ಸಮುದಾಯಗಳ ಮಧ್ಯೆ ಕಲ್ಲು ತೂರಾಟ ನಡೆಯಿತು. ಇದರ ಪರಿಣಾಮವಾಗಿ ಕಲ್ಲು ತೂರಾಟ ಮಾಡಿದವರ ಅಕ್ರಮ ಕಟ್ಟಡಗಳನ್ನು ಧ್ವಂಸ ಮಾಡಬೇಕೆಂದು ಬಿಜೆಪಿ ರಾಜಕಾರಣಿಯೊಬ್ಬರು ಮಹಾನಗರ ಪಾಲಿಕೆಗೆ ಪತ್ರ ಬರೆಯುತ್ತಾರೆ. ಅದರ ಪರಿಣಾಮವಾಗಿ ಮಹಾನಗರ ಪಾಲಿಕೆಯು ಯಾರಿಗೂ ನೋಟಿಸ್ ನೀಡದೆ, ಏಕಾಏಕಿ ಬುಲ್ಡೋಜರ್ ತೆಗೆದುಕೊಂಡು ಬಂದು ಬೀದಿ ವ್ಯಾಪಾರಿಗಳ ತಳ್ಳುವ ಗಾಡಿಗಳು, ಚಿಕ್ಕ ಚಿಕ್ಕ ಅಂಗಡಿಗಳನ್ನು ಧ್ವಂಸ ಮಾಡಿತು. ಬೀದಿ ವ್ಯಾಪಾರಿಗಳ ಸರಕು ನಾಶವಾಯಿತು. ಅವರ ತಳ್ಳುವ ಗಾಡಿಗಳು ನಾಶವಾದವು. ಅಲ್ಲಿನ ವ್ಯಾಪಾರಿಗಳ ಅನೇಕರು ಬೀದಿ ವ್ಯಾಪಾರದ ಗುರುತಿನ ಚೀಟಿ ಇರುವವರಾಗಿದ್ದರು. ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ ೨೦೧೪ರ ಪ್ರಕಾರ ವ್ಯಾಪಾರದ ಪ್ರಮಾಣ ಪತ್ರ ಹೊಂದಿರುವವರಾಗಿದ್ದರು. ಯಾವುದೇ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ಮುನ್ನ ನೋಟಿಸ್ ನೀಡಬೇಕು, ಸರಕು ವಶಪಡಿಸಿಕೊಳ್ಳುವುದಾದರೆ ಮಹಜರು ಮಾಡಬೇಕು. ಇಲ್ಲಿ ಇದು ಯಾವುದು ಆಗಲಿಲ್ಲ. ಅಷ್ಟೇ ಅಲ್ಲ, ದೇಶದ ಸರ್ವೋಚ್ಚ ನ್ಯಾಯಾಲಯ ಈ ಎತ್ತಂಗಡಿ ಹಾಗೂ ಧ್ವಂಸದ ವಿರುದ್ಧ ತಡೆಯಾಜ್ಞೆ ನೀಡಿದ ಮೇಲೂ ಎತ್ತಂಗಡಿ ಹಾಗೂ ಧ್ವಂಸ ಕಾರ್ಯಾಚರಣೆ ನಡೆಯಿತು. ಸಿಪಿಐ ಹಾಗೂ ಸಿಪಿಐ (ಎಂ.ಎಲ್.) ಪಕ್ಷಗಳ ಮುಖಂಡರು ಅಲ್ಲಿ ಸೇರಿದ ನಂತರವೇ ಈ ಅಮಾನವೀಯ, ಕಾನೂನುಬಾಹಿರ ಎತ್ತಂಗಡಿ ನಿಂತಿತು. ಈ ಕಾರ್ಯಾಚರಣೆಯಲ್ಲಿ ಕೆಲವು ಹಿಂದೂ ವ್ಯಾಪಾರಿಗಳ ಅಂಗಡಿಗಳು ಸಹ ಧ್ವಂಸವಾದವು.


ಒಟ್ಟಾರೆ ನೋಡುವುದಾದರೆ ಖಾಸಗಿ ವ್ಯಕ್ತಿಗಳಿಂದಲೂ ಸರಿ, ಸರ್ಕಾರಗಳಿಂದಲೂ ಸರಿ ಬಡ ವ್ಯಾಪಾರಿಗಳ ಮೇಲೆ, ಮುಖ್ಯವಾಗಿ ಮುಸ್ಲಿಮ್ ವ್ಯಾಪಾರಿಗಳ ಮೇಲೆ ದಾಳಿಗಳಾಗುತ್ತಿವೆ.
ಇದು ಸಂವಿಧಾನಬಾಹಿರವಾದ ನಡೆ, ಸಮಾಜವನ್ನು ಧರ್ಮದ ಮೂಲಕ ಒಡೆಯುವ ನಡೆ. ಭಾರತದ ಸಂವಿಧಾನದ ಅನುಚ್ಛೇದ 15 (1) ರ ಪ್ರಕಾರ, ರಾಜ್ಯವು (ಅಂದರೆ ರಾಜ್ಯ ಅಥವಾ ಕೇಂದ್ರ ಸರ್ಕಾರ, ಸರ್ಕಾರಿ ಸಂಸ್ಥೆಗಳು) ಯಾವುದೇ ನಾಗರಿಕರ ವಿರುದ್ಧ ಧರ್ಮ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡತಕ್ಕದಲ್ಲ.
ಹಾಗಿದ್ದ ಮೇಲೆ ಸರ್ಕಾರವು ಗುಜರಾತ್ನಲ್ಲಿ, ಖರ್ಗೋನ್ನಲ್ಲಿ, ಜಹಾಂಗೀರ್ಪುರಿಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಯಾಗಿಸಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಅದೇ ರೀತಿ ಸಂವಿಧಾನದ ಅನುಚ್ಛೇದ 15(2)ರಲ್ಲಿ ಹೇಳುವುದೇನೆಂದರೆ, ಧರ್ಮ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನು
(ಎ) ಅಂಗಡಿಗಳು, ಸಾರ್ವಜನಿಕ ಉಪಾಹಾರ ಗೃಹಗಳು, ಹೋಟೆಲುಗಳು ಮತ್ತು ಸಾರ್ವಜನಿಕ ಮನರಂಜನಾ ಸ್ಥಳಗಳಿಗೆ ಪ್ರವೇಶಿಸುವ ಸಂಬಂಧದಲ್ಲಿ, ಅಥವಾ
(ಬಿ) ಪೂರ್ಣವಾಗಿ ಅಥವಾ ಭಾಗಶಃ ರಾಜ್ಯನಿಧಿಗಳಿಂದ ಪೋಷಿತವಾದ ಅಥವಾ ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿತವಾದ ಬಾವಿಗಳನ್ನು, ಕೆರೆಗಳನ್ನು,, ಸ್ನಾನಘಟ್ಟಗಳನ್ನು, ರಸ್ತೆಗಳನ್ನು ಮತ್ತು ಸಾರ್ವಜನಿಕರು ಸೇರುವ ಸ್ಥಳಗಳನ್ನು ಉಪಯೋಗಿಸುವ ಸಂಬಂಧದಲ್ಲಿ ಯಾವುದೇ ಅಸಮರ್ಥತೆಗೆ, ಹೊಣೆಗಾರಿಕೆಗೆ, ನಿರ್ಬಂಧಕ್ಕೆ ಅಥವಾ ಷರತ್ತಿಗೆ ಒಳಪಟ್ಟಿರತಕ್ಕದ್ದಲ್ಲ
ಈ ಅನುಚ್ಛೇದದಲ್ಲಿ ಆರ್ಥಿಕ ಬಹಿಷ್ಕಾರವನ್ನು ನೇರವಾಗಿ ಪ್ರಸ್ತಾಪಿಸದೆ ಇದ್ದರೂ ಧರ್ಮದ ಆಧಾರದ ಮೇರೆಗೆ ಯಾರು ಕೂಡ ಸಾರ್ವಜನಿಕ ಸೇವೆಗಳನ್ನು (ಮೇಲೆ, 15(2)(ಎ) ರಲ್ಲಿ ಅಂಗಡಿ ಅಂದರೆ ಕೇವಲ ಅಂಗಡಿಯಲ್ಲ ಬದಲಿಗೆ ಯಾವುದೇ ಸೇವೆ), ಸ್ಥಳಗಳನ್ನು ಉಪಯೋಗಿಸುವುದರಲ್ಲಿ ಮತ್ತಿತರರು ನಿರ್ಬಂಧ ಹಾಕತಕ್ಕದ್ದಲ್ಲ ಎಂದು ಹೇಳುತ್ತದೆ. ಹಾಗಾಗಿ ಮುಸಲ್ಮಾನ ವ್ಯಾಪಾರಿಗಳು ಜಾತ್ರೆಗೆ ಹೋಗಬಾರದು, ಅವರ ಬಳಿ ಸರಕುಗಳನ್ನು ಕೊಳ್ಳಬಾರದು ಎಂಬುದೆಲ್ಲ ಸಂವಿಧಾನ ವಿರೋಧಿ ಎಂಬುದು ಸ್ಪಷ್ಟವಾಗುತ್ತದೆ.
ಮೇಲೆ ನಮೂದಿಸಿರುವ ಘಟನೆಗಳೆಲ್ಲ ಕಾನೂನು ಬಾಹಿರ, ಸಂವಿಧಾನ ಬಾಹಿರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಏಕೆ ಹೀಗೆ ಆಗುತ್ತಿದೆ ಎಂಬ ಪ್ರಶ್ನೆ ಇದೆ. ಅದಕ್ಕೆ ಉತ್ತರ ಆರ್ಸ್ಸೆಸ್ಸ್ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರ ‘ವೀ ಓರ್ ಅವರ್ ನೇಷನ್ ಹುಡ್ ಡಿಫೈನ್ಡ್’ ಎಂಬ ಪುಸ್ತಕದಲ್ಲಿದೆ. ಆ ಪುಸ್ತಕದಲ್ಲಿ ಅವರು ಸ್ಪಷ್ಟವಾಗಿ ಹೇಳುವುದೇನೆಂದರೆ, ಭಾರತದಲ್ಲಿ ಅಲ್ಪಸಂಖ್ಯಾತರು ಉಳಿಯುವುದಾದರೆ, ಅವರು ಎರಡನೇ ದರ್ಜೆ ಪ್ರಜೆಗಳಾಗಿಯೇ ಉಳಿಯಬೇಕೆಂದು. ಈ ಹಿನ್ನೆಲೆಯಲ್ಲಿ ನೋಡಿದರೆ ಮುಸ್ಲಿಮರ ಹಕ್ಕುಗಳ ಮೇಲೆ ಆಗುತ್ತಿರುವ ದಾಳಿ ಏಕೆ ಎಂದು ಗೊತ್ತಾಗುತ್ತದೆ.
ಮಾತ್ರವಲ್ಲ, ಮುಸ್ಲಿಮ್ ಸಮುದಾಯದಲ್ಲಿ ಅನೇಕರು ಸರ್ಕಾರಿ ಅಥವಾ ಖಾಸಗಿ ನೌಕರಿಗೆ ಹೋಗದೆ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಹೀಗಿರುವಾಗ ಅವರ ವ್ಯಾಪಾರದ ಮೇಲೆ ದಾಳಿ ಮಾಡಿದಾಗ ಅವರ ಆರ್ಥಿಕ ಸ್ವಾವಲಂಬನೆ ಮೇಲೆ ದಾಳಿ ಮಾಡಿದಂತಾಗುತ್ತದೆ. ಕೆಲವರು ಹೇಳಬಹುದು, ಅಲ್ಲಿ ಇಲ್ಲಿ ಮಾತ್ರ ಈ ತರಹದ ಘಟನೆಗಳಾಗಿದೆ ಎಲ್ಲರೂ ಭಯ ಪಡಬೇಕಿಲ್ಲವೆಂದು. ಆದರೆ ಎರಡು ಕಡೆ ಆದರೆ ಸಾಕು, ದೇಶದ ಎಲ್ಲಡೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ.
ಈಗಾಗಲೇ ದೇಶದ ಎಲ್ಲ ಧರ್ಮದ ಬೀದಿ ವ್ಯಾಪಾರಿಗಳು ಪ್ರತಿ ನಿತ್ಯ ಆತಂಕದಲ್ಲೇ ಜೀವನ ಮಾಡುತ್ತಾರೆ. ಬೀದಿ ವ್ಯಾಪಾರಿಗಳ ಕಾಯ್ದೆ 2014 ಬಂದು 8 ವರ್ಷವಾದರೂ ಅದು ಇನ್ನೂ ಸಮರ್ಪಕ ಜಾರಿಗೆ ಬಂದಿಲ್ಲ. ಹಲವು ಅಧಿಕಾರಿಗಳಿಗೆ ಬೀದಿ ವ್ಯಾಪಾರ ಒಂದು ಹಕ್ಕು ಎಂಬ ಅರಿವಿಲ್ಲ. ಹಲವು ನಗರಗಳಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆಯಾಗಿಲ್ಲ, ಗುರುತಿನ ಚೀಟಿ ನೀಡಿಲ್ಲ. ಈಗಲೂ ದಿನೇ ದಿನೇ ಎತ್ತಂಗಡಿಗಳಾಗುತ್ತಿವೆ. ಪರಿಸ್ಥಿತಿ ಈ ರೀತಿ ಇರುವಾಗ, ಮುಸ್ಲಿಮ್ ಬೀದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿ ಅವರಿಗೆ ಭಯ ಆತಂಕ ಮೂಡಿಸುವುದಲ್ಲದೆ, ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತಿದ್ದಾರೆ. ಭಾರತದ ಮಾರುಕಟ್ಟೆಗಳಲ್ಲಿ ಸದ್ಯ ಸಾಮರಸ್ಯವಿದೆ. ಸಂಘಪರಿವಾರದವರು ಎಷ್ಟೇ ಪ್ರಯತ್ನ ಪಟ್ಟರೂ ಮಾರುಕಟ್ಟೆಗಳಲ್ಲಿ ಹಿಂದೂ ಹಾಗೂ ಮುಸ್ಲಿಮ್ ವ್ಯಾಪಾರಿಗಳು ಒಟ್ಟಿಗೆ ಇದ್ದಾರೆ. ಆದರೆ ದ್ವೇಷ ಹೆಚ್ಚುತ್ತಲೇ ಇರುವುದು ಅಪಾಯ.
ಇದೇ ಸಂಘಪರಿವಾರದವರು ದೊಡ್ಡ ಮಾಲ್ಗಳಿಗೆ ಅಥವಾ ಷೋ ರೂಮ್ಗಳಿಗೆ ಹೋಗಿ ಈ ರೀತಿ ಪುಂಡಾಟಿಕೆ ಮಾಡುವುದಿಲ್ಲ. ಗುರಿಯಾಗುತ್ತಿರುವುದು ಬಡ ವ್ಯಾಪಾರಿಗಳು. ಇದನ್ನು ನಾವು ಗಮನಿಸಬೇಕು ಹಾಗೂ ಎದುರಿಸಬೇಕು.
ಅವರ ದ್ವೇಷವನ್ನು ಪ್ರೀತಿಯಿಂದ ಸೋಲಿಸಬೇಕು. ಎಲ್ಲಾ ಧರ್ಮದವರು ಸಹ ಆನ್ ಲೈನ್ ನಲ್ಲಿ ಕೊಳ್ಳುವ ಬದಲು, ದೊಡ್ಡ ಮಾಲ್ ಗಳಲ್ಲಿ ಕೊಳ್ಳುವ ಬದಲು ಬೀದಿ ವ್ಯಾಪಾರಿಗಳಿಂದ, ಸಣ್ಣ ಅಂಗಡಿಗಳಿಂದ ಕೊಳ್ಳೋಣ. ಸಣ್ಣ ವ್ಯಾಪಾರಿಗಳ ಬಳಿ ಸಂಪರ್ಕ ಬೆಳೆಸೋಣ. ನಮ್ಮ ನಮ್ಮ ಮನೆಗಳ ಬಳಿ, ಕಚೇರಿಗಳ ಬಳಿ ಇರುವ ವ್ಯಾಪಾರಿಗಳ ಬಳಿ ಸಂಪರ್ಕ ಹೆಚ್ಚಿಸೋಣ. ಅವರು ಧರ್ಮದ ಗೋಡೆ ಕಟ್ಟಿದರೆ ನಾವು ಮನುಷ್ಯ ಮನುಷ್ಯರ ಮಧ್ಯೆ ಮಧ್ಯೆ ಸೇತುವೆ ಕಟ್ಟೋಣ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!