ನ್ಯೂಸ್ ಕ್ಲಿಕ್ ಮೇಲಿನ ದಾಳಿ ಸರ್ವಾಧಿಕಾರಿ ಮನಸ್ಥಿತಿಯ ಪ್ರತೀಕ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲಿನ ದೆಹಲಿ ಪೊಲೀಸ್ ದಾಳಿ ಕೇಂದ್ರದ ಸರ್ವಾಧಿಕಾರಿ ಮನಸ್ಥಿತಿಯ ಪ್ರತೀಕ. CAA ಮತ್ತು ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ರೈತರ ಹೋರಾಟದಲ್ಲಿ ಈ ಮಾಧ್ಯಮ ಸಂಸ್ಥೆ ಕೇಂದ್ರ ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಿತ್ತು. ಅದರ ಅಸಹನೆಯ ಫಲವಾಗಿ ಈ ಮಾಧ್ಯಮ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದೆ ಎಂದು ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ.

- Advertisement -


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ”ED, CBI, ITಯಂತಹ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಇಲ್ಲಿಯವರೆಗೂ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಬಳಸುತಿತ್ತು. ಈಗ ತನ್ನ ಹುಳುಕುಗಳನ್ನು ಎತ್ತಿ ತೋರಿಸುವ ಮಾಧ್ಯಮ ಸಂಸ್ಥೆಗಳ ಮೇಲೂ ಈ ಸಂಸ್ಥೆಗಳನ್ನು ಛೂ ಬಿಡುತ್ತಿದೆ. ತಾನು ಪ್ರಶ್ನಾತೀತ, ತನ್ನನ್ನು ಯಾರೂ ಪ್ರಶ್ನಿಸಬಾರದು ಎಂಬ ಕೇಂದ್ರದ ಧೋರಣೆಯೇ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲಿನ ದಾಳಿಗೆ ಕಾರಣ” ಎಂದು ಕಿಡಿಕಾರಿದ್ದಾರೆ. ”ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲಿನ ದಾಳಿ ಮಾಧ್ಯಮಗಳನ್ನು ಹೆದರಿಕೆಯಿಂದ ಬಾಯಿ ಮುಚ್ಚಿಸುವ ತಂತ್ರ. ಚುನಾವಣಾ ಸಮೀಪದಲ್ಲೇ ಕೇಂದ್ರ ಕೆಲವು ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ತನ್ನ ಹುಳುಕುಗಳು ಬಯಲಾಗುವ ಭಯದಿಂದ ಸತ್ಯ ಹೇಳುವ ಮಾಧ್ಯಮಗಳನ್ನು ಮಟ್ಟ ಹಾಕುವ ಕೆಲಸವನ್ನು ಕೇಂದ್ರ ವ್ಯವಸ್ಥಿತವಾಗಿ ಮಾಡುತ್ತಿದೆ” ಎಂದು ದಿನೇಶ್ ಗುಂಡೂರಾವ್ ದೂರಿದ್ದಾರೆ.



Join Whatsapp