ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಚಿಕ್ಕಮಗಳೂರು ತಾಲೂಕು ಕಾರೇಹಟ್ಟಿಯ ಉಮ್ಮೇಸಾರಾ ಅಸ್ಮತ್ ಅಲಿ ಬಿಎಸ್ಸಿ ಅವರಿಗೆ ತೋಟಗಾರಿಕೆ ವಿಷಯದಲ್ಲಿ 16 ಚಿನ್ನದ ಪದಕ ಹಾಗೂ ಹಾಸನದ ಮೇಘಾ ಅರುಣ್ ಅವರಿಗೆ ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಬೆಳಗಾವಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವಕ್ಕೆ ಬುಧವಾರ ಬೆಳಿಗ್ಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದ್ದು, ಉಮ್ಮೇಸಾರಾ, ಮೇಘಾ ಅರುಣ್ ಸೇರಿದಂತೆ ಒಟ್ಟು 18 ಪದವಿ ವಿದ್ಯಾರ್ಥಿಗಳು ಮತ್ತು 12 ಸ್ನಾತಕೋತ್ತರ ಹಾಗೂ ನಾಲ್ವರು ಪಿಎಚ್ ಡಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು.
ಅಲ್ಲದೆ, 680 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಪದವಿ ಪ್ರದಾನ ಮಾಡಿದ್ದಾರೆ. ಅವರಲ್ಲಿ 475 ಪದವಿ, 137 ಸ್ನಾತಕೋತ್ತರ ಹಾಗೂ 45 ಪಿಎಚ್ ಡಿ ವಿದ್ಯಾರ್ಥಿಗಳು ಸೇರಿದ್ದಾರೆ.
ಇದೇ ವೇಳೆ ಮಾಜಿ ಸಚಿವರೂ ಆದ ಹಿರಿಯೂರಿನ ಪ್ರಗತಿ ಪರ ರೈತ ಎಚ್. ಏಕಾಂತಯ್ಯ ಅವರಿಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಾರಂಭದಲ್ಲಿ ಜಲ ತಜ್ಞ ರಾಜಸ್ತಾನದ ಡಾ. ರಾಜೇಂದ್ರ ಸಿಂಗ್, ತೋಟಗಾರಿಕೆ ಸಚಿವ ಮುನಿರತ್ನ, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ಪಾಲ್ಗೊಂಡಿದ್ದರು.