ಗುವಾಹಟಿ: ಈ ವರ್ಷ ದ ಪಿಯುಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ 35,800 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ವಿದ್ಯಾರ್ಥಿನಿಯರಿಗೆ ಅಸ್ಸಾಂ ಸರ್ಕಾರವು ಸ್ಕೂಟರ್ ಗಳನ್ನು ವಿತರಿಸಲಿದೆ.
ಗುವಾಹಟಿಯ ಜನತಾ ಭವನದಲ್ಲಿ ಬುಧವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 60 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ 29,748 ಬಾಲಕಿಯರು ಮತ್ತು ಶೇಕಡಾ 75 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ 6,052 ಬಾಲಕರಿಗೆ ಸ್ಕೂಟರ್ ಗಳನ್ನು ಒದಗಿಸಲಾಗುವುದು ಎಂದರು.
ಅಲ್ಲದೆ, ಉನ್ನತ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ದಾಖಲಾತಿ ಮತ್ತು ವಿಮೆಗಾಗಿ ಆರ್ಥಿಕ ನೆರವು ನೀಡುತ್ತದೆ ಎಂದು ಅವರು ಹೇಳಿದರು. ಪ್ರಾಂತೀಯ ಕಾಲೇಜುಗಳಲ್ಲಿ ನಿಗದಿತ ವೇತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರ ಮಾಸಿಕ ಸಂಭಾವನೆಯನ್ನು ₹55,000ಗೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.
ಕ್ಯಾಬಿನೆಟ್ ನಿರ್ಧಾರಗಳನ್ನು ಪ್ರಕಟಿಸಿದ ಅಸ್ಸಾಂ ಸಚಿವ ಜಯಂತ ಮಲ್ಲಾ ಬರುವಾ, ಸ್ಕೂಟರ್ ವಿತರಣಾ ಕಾರ್ಯಕ್ರಮವು ನವೆಂಬರ್ 30 ರಂದು ಕಾಮರೂಪ್ ಜಿಲ್ಲೆಯಲ್ಲಿ ವಿಧ್ಯುಕ್ತವಾಗಿ ನಡೆಸಲಾಗುವುದು ಎಂದು ಹೇಳಿದರು.
₹258.9 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ ಎಂದು ಶಿಕ್ಷಣ ಸಚಿವ ರನೋಜ್ ಹೇಳಿದ್ದಾರೆ.