ಅಸ್ಸಾಂ ಪಿಯು ತರಗತಿ ಪಠ್ಯಕ್ರಮ। ಅಯೋಧ್ಯೆ, ಗುಜರಾತ್ ಗಲಭೆ ಕುರಿತ ಪಾಠಗಳಿಗೆ ಕತ್ತರಿ

Prasthutha|

► ನೆಹರೂ ಕುರಿತ ಎಲ್ಲಾ ವಿಷಯಗಳು ಮಾಯ!

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ 30% ಕಡಿತ ಮಾಡುವ ಭಾಗವಾಗಿ 12 ನೇ ತರಗತಿಯ ಪಠ್ಯಕ್ರಮದಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಮಂಡಲ್ ಆಯೋಗದ ವರದಿ ಮತ್ತು 2002ರ ಗುಜರಾತ್ ಗಲಭೆಗಳು ಸೇರಿದಂತೆ ಜಾತಿಗೆ ಸಂಬಂಧಿಸಿದ ಬರಹಗಳನ್ನು ಉಳ್ಳ ಪಾಠಗಳನ್ನು ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ಕತ್ತರಿ ಹಾಕಿದೆ ಎಂಬುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಗುರುವಾರ ವರದಿ ಮಾಡಿದೆ.

ಪೊಲಿಟಿಕಲ್ ಸೈನ್ಸ್‌ನಲ್ಲಿ ನೆಹರೂ‌ರವರಿಗೆ ಸಂಬಂಧಿಸಿದ ಎಲ್ಲ ಪಠ್ಯಗಳನ್ನು ತೆಗೆದು ಹಾಕಲಾಗಿದೆ. ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ, ‘ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ’ ಎಂಬ ಶೀರ್ಷಿಕೆಯಡಿಯಲ್ಲಿನ ‘ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳು; ರಾಷ್ಟ್ರ ನಿರ್ಮಾಣಕ್ಕೆ ನೆಹರೂ ಅವರ ವಿಧಾನ; ಕ್ಷಾಮ ಮತ್ತು ಪಂಚ ವಾರ್ಷಿಕ ಯೋಜನೆಗಳ ಅಮಾನತು; ನೆಹರೂರವರ ವಿದೇಶಾಂಗ ನೀತಿ; ನೆಹರೂ ನಂತರ ರಾಜಕೀಯ ಉತ್ತರಾಧಿಕಾರ; ಗರೀಬಿ ಹಟಾವೊ ರಾಜಕೀಯ; ಗುಜರಾತ್‌ನಲ್ಲಿ ನವನಿರ್ಮಾಣ್ ಚಳುವಳಿ; ಪಂಜಾಬ್ ಬಿಕ್ಕಟ್ಟು ಮತ್ತು 1984 ರ ಸಿಖ್ ವಿರೋಧಿ ಗಲಭೆಗಳು; ಮಂಡಲ್ ಆಯೋಗದ ವರದಿಯ ಅನುಷ್ಠಾನ; ಯುಎಫ್ ಮತ್ತು ಎನ್‌ಡಿಎ ಸರ್ಕಾರಗಳು; 2004 ಚುನಾವಣೆ ಮತ್ತು ಯುಪಿಎ ಸರ್ಕಾರ; ಅಯೋಧ್ಯೆ ವಿವಾದ; ಮತ್ತು ಗುಜರಾತ್ ಗಲಭೆಗಳು ಎಂಬ ಪಾಠಗಳನ್ನು ಕೈ ಬಿಡಲಾಗಿದೆ.

- Advertisement -

ಇದರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳು; ಕಾಶ್ಮೀರದ ಸಮಸ್ಯೆಗಳು; 1962, 1965 ಮತ್ತು 1971 ರಲ್ಲಿನ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಯುದ್ಧಗಳು; ತುರ್ತುಪರಿಸ್ಥಿತಿ; ಜನತಾದಳ ಮತ್ತು ಬಿಜೆಪಿಯ ಉಗಮ ಎಂಬ ಇತರ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ. 12 ನೇ ತರಗತಿಯ ಇತಿಹಾಸ ಪಠ್ಯಕ್ರಮದಲ್ಲಿ ಈಗ ‘ರಕ್ತಸಂಬಂಧ, ಜಾತಿ ಮತ್ತು ವರ್ಗ’ ವಿಭಾಗವನ್ನು ಒಳಗೊಂಡಿಲ್ಲ.

ಇಂಗ್ಲಿಷ್‌ನಲ್ಲಿ, ‘ಬಾಲ್ಯದ ನೆನಪುಗಳು’ ಎಂಬ ಅಧ್ಯಾಯವನ್ನು ಬಿಡಲಾಗಿದೆ. ಅದರಲ್ಲಿ, ಅಮೆರಿಕದ ಶ್ರೇಷ್ಠ ಸ್ಥಳೀಯ ಬರಹಗಾರ್ತಿ ಮತ್ತು ಸುಧಾರಕಿಯಾದ ಜಿತ್ಕಲಾ-ಸಾ ಮತ್ತು ತಮಿಳು ದಲಿತ ಬರಹಗಾರ್ತಿ ಮತ್ತು ಶಿಕ್ಷಕಿ ಬಾಮಾರವರ ಆತ್ಮಚರಿತ್ರೆಯ ಭಾಗಗಳಿಗೆ ಕತ್ತರಿ ಹಾಕಲಾಗಿದೆ. ಕೈಬಿಡಲಾದ ಪಠ್ಯಕ್ರಮದ ವಿಭಾಗಗಳ ಪಟ್ಟಿಯನ್ನು ಇತ್ತೀಚೆಗೆ ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ಎಎಚ್‌ಎಸ್‌ಇಸಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ರಾಜ್ಯಾದ್ಯಂತ ಶಿಕ್ಷಕರು ಮತ್ತು ವಿಷಯ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಈ ವಿಭಾಗಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -