ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಏಷ್ಯಾದ ಮೊದಲ ಮತ್ತು ಭಾರತದ ಪ್ರಪ್ರಥಮ ಸ್ವತಂತ್ರ ತಜ್ಞೆಯಾಗಿ ಬೆಂಗಳೂರು ಮೂಲದ ಅಶ್ವಿನಿ ಕೆ.ಪಿ. ನೇಮಕಗೊಂಡಿದ್ದಾರೆ.
ಝಾಂಬಿಯಾ ದೇಶದ ಎ. ತೇಂಡಯಿ ಅಚ್ಯೂಮೆ ತಮ್ಮ 3 ವರ್ಷದ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ಬಳಿಕ ಸ್ಪೆಷಲ್ ರಿಪೋರ್ಟರ್ ಸ್ಥಾನ ಖಾಲಿ ಇತ್ತು. ಈ ಸ್ಥಾನಕ್ಕೆ ಭಾರತದವರೇ ಆದ ಜೋಶುವಾ ಕ್ಯಾಸ್ಟೆಲಿನೋ , ಬೋಟ್ಸ್ವಾನಾದ ಯೂನಿಟಿ ಡೋವ್ ಮತ್ತು ಅಶ್ವಿನಿ ಸೇರಿದಂತೆ ಮೂವರ ಹೆಸರು ಆಯ್ಕೆಯಾಗಿತ್ತು. ಅಂತಿಮವಾಗಿ ಅಶ್ವಿನಿ ಕೆ.ಪಿ. ನೇಮಕವಾಗಿದ್ದಾರೆ.
ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ 51ನೇ ಅಧಿವೇಶನ ಮುಕ್ತಾಯಕ್ಕೆ ಮುನ್ನ ಅಕ್ಟೋಬರ್ 7ರಂದು ಅಶ್ವಿನಿ ಅವರನ್ನು ಸ್ಪೆಷಲ್ ರಿಪೋರ್ಟರ್ ಆಗಿ ನೇಮಕಾತಿ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಅಶ್ವಿನಿ ಅವರು ಎಸ್ಆರ್ ಆಗಿ ನೇಮಕವಾದ ಮೊದಲ ಭಾರತೀಯ ಮಹಿಳೆ ಮಾತ್ರವಲ್ಲ, ಮೊದಲ ಏಷ್ಯನ್ ವ್ಯಕ್ತಿ ಕೂಡ ಆಗಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ಕೆಪಿ, “ಝರಿಯಾ: ವುಮೆನ್ಸ್ ಅಲಾಯನ್ಸ್ ಫಾರ್ ಡಿಗ್ನಿಟಿ ಅಂಡ್ ಈಕ್ವಾಲಿಟಿ” ಎಂಬ ಎನ್ ಜಿಒದ ಸಹ-ಸಂಸ್ಥಾಪಕಿಯಾಗಿದ್ದಾರೆ.
ಜನಾಂಗೀಯತೆ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾ (ಪರದೇಶಿಗಳ ಬಗ್ಗೆ ಭಯ) ಹಾಗೂ ಇಂಥ ವಿವಿಧ ರೀತಿಯ ವಿಚಾರಗಳ ಬಗ್ಗೆ ಯುಎನ್ಎಚ್ಆರ್ ಸಿಗೆ ಅಶ್ವಿನಿ ಕೆ.ಪಿ. ಸ್ವತಂತ್ರ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ನವೆಂಬರ್ 1ರಿಂದ ಅವರ ಸೇವಾವಧಿ ಇರಲಿದ್ದು, ಮೂರು ವರ್ಷ ಕಾಲ ಕಾರ್ಯನಿರ್ವಹಿಸಲಿದ್ದಾರೆ.
ಇದು ಸಂಭಾವನೆ ರಹಿತ ಹುದ್ದೆಯಾಗಿದ್ದು, ಯುಎನ್ ಎಚ್ ಆರ್ ಸಿಯಲ್ಲಿ ವಿವಿಧ ವಿಚಾರಗಳಿಗೆ ತಜ್ಞರಾಗಿ 45 ಎಸ್ ಆರ್ ಗಳು ಮತ್ತು ದೇಶ ನಿರ್ದಿಷ್ಟ ತಜ್ಞರಾಗಿ 13 ಎಸ್ ಆರ್ ಗಳಿರುತ್ತಾರೆ. ಇವರೆಲ್ಲರೂ ತಮಗೆ ವಹಿಸಿದ ವಿಚಾರಗಳ ಬಗ್ಗೆ ಜಾಗತಿಕ ಅಥವಾ ನಿರ್ದಿಷ್ಟ ದೇಶದಲ್ಲಿ ಬೆಳವಣಿಗೆಯ ಮೇಲೆ ನಿಗಾ ಇಟ್ಟು ಸ್ವತಂತ್ರವಾಗಿ ಅವಲೋಕಿಸಿ ಯುಎನ್ ಎಚ್ ಆರ್ ಸಿ ಅಧ್ಯಕ್ಷರಿಗೆ ವರದಿ ಮತ್ತು ಸಲಹೆ ನೀಡುವ ಜವಾಬ್ದಾರಿ ಹೊಂದಿರುತ್ತಾರೆ.
ಜನಾಂಗೀಯತೆಯ ವಿಚಾರದ ಬಗ್ಗೆ 1994ರಿಂದ ಎಸ್ಆರ್ ಆಗಿ ನೇಮಕವಾಗಿರುವವರಲ್ಲಿ ಅಶ್ವಿನಿ ಅವರು ಆರನೆಯವರು. ಈ ಮೊದಲು ಎಸ್ಆರ್ ಗಳಾದ ಎಲ್ಲಾ ಐವರೂ ಕೂಡ ಆಫ್ರಿಕನ್ನರು. ಈಗ ಮೊದಲ ಬಾರಿಗೆ ಏಷ್ಯಾದ ವ್ಯಕ್ತಿ ಜನಾಂಗೀಯ ಸಮಸ್ಯೆ ಬಗ್ಗೆ ಯುಎನ್ಎಚ್ಆರ್ ಸಿಯಲ್ಲಿ ಸ್ವತಂತ್ರ ತಜ್ಞೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.