ಹರ್ಭಜನ್ ಹಿಂದಿಕ್ಕಿ ಟಾಪ್ 3 ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್

Prasthutha|

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್, ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ದಾಖಲೆಯನ್ನು ಮುರಿದಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ದಿಗ್ಗಜರಾದ ಅನಿಲ್ ಕುಂಬ್ಲೆ ಹಾಗೂ ಕಪಿಲ್ ದೇವ್ ಬಳಿಕ ಅಶ್ವಿನ್ ಟಾಪ್ 3 ಸ್ಥಾನಕ್ಕೇರಿದ್ದಾರೆ.

- Advertisement -

ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿ ಜೀವನದ 80ನೇ ಟೆಸ್ಟ್ ಪಂದ್ಯವನ್ನಾಡಿದ ರವಿಚಂದ್ರನ್ ಅಶ್ವಿನ್, ಆರಂಭಿಕ ಟಾಮ್ ಲಥಾಮ್‌ ರೂಪದಲ್ಲಿ 418ನೇ ವಿಕೆಟ್ ಪಡೆಯುತ್ತಿದ್ದಂತೆ, ಹರ್ಭಜನ್ ಸಿಂಗ್ ದಾಖಲೆಯನ್ನ ಹಿಂದಿಕ್ಕಿದರು. 103 ಟೆಸ್ಟ್ ಪಂದ್ಯಗಳನ್ನಾಡಿರುವ ಹರ್ಭಜನ್ ಸಿಂಗ್ ಒಟ್ಟು 417 ವಿಕೆಟ್ ಪಡೆದಿದ್ದಾರೆ. ಆದರೆ ಈ ದಾಖಲೆಯನ್ನು ಅಶ್ವಿನ್ ಕೇವಲ 80 ಟೆಸ್ಟ್ ಪಂದ್ಯಗಳಲ್ಲೇ ತಮ್ಮದಾಗಿಸಿಕೊಂಡಿದ್ದಾರೆ.

ಕಾನ್ಪುರ ಟೆಸ್ಟ್’ನ ಮೊದಲ ಹಾಗೂ ದ್ವಿತೀಯ ಇನ್ನಿಂಗ್ಸ್’ನಲ್ಲಿ ಅಶ್ವಿನ್ ತಲಾ 3 ವಿಕೆಟ್ ಪಡೆದು ಮಿಂಚಿದ್ದರು.

- Advertisement -

ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಜಂಬೋ ಖ್ಯಾತಿಯ ಅನಿಲ್‌ ಕುಂಬ್ಳೆ ಹೆಸರಿನಲ್ಲಿದೆ. 132 ಪಂದ್ಯಗಳಲ್ಲಿ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಗರಿಷ್ಠ ವಿಕೆಟ್ ಟೇಕರ್ ಎಂಬ ಸಾಧನೆಯೂ ಕುಂಬ್ಲೆ ಹೆಸರಿನಲ್ಲಿದೆ.  ವಿಶ್ವಕಪ್ ವಿಜೇತ ಕಪಿಲ್ ದೇವ್ ಭಾರತದ ಪರ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 131ಪಂದ್ಯಗಳಲ್ಲಿ 434 ವಿಕೆಟ್ ಪಡೆದಿದ್ದಾರೆ. ಕಪಿಲ್ ದಾಖಲೆ ಮುರಿಯಲು ಅಶ್ವಿನ್ 16 ವಿಕೆಟ್ ಹಿಂದಿದ್ದಾರೆ.

Join Whatsapp