ಆ್ಯಷಸ್: ದ್ವಿತೀಯ ಟೆಸ್ಟ್’ನಲ್ಲೂ ಇಂಗ್ಲೆಂಡ್’ಗೆ ಹೀನಾಯ ಸೋಲು

Prasthutha|

ಅಡಿಲೇಡ್: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲೂ ಅತಿಥೇಯ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ದ್ವಿತೀಯ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 468 ರನ್’ಗಳ ಕಠಿಣ ಗುರಿಯನ್ನು ಬೆನ್ನತ್ತುವ ವೇಳೆ ಜೋ ರೂಟ್ ಪಡೆ ಕೇವಲ 192 ರನ್’ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಆ ಮೂಲಕ ಆಸೀಸ್, ಅಡಿಲೇಡ್ ಓವಲ್’ನಲ್ಲಿ 275 ರನ್’ಗಳ ಅಂತರದಲ್ಲಿ ಬೃಹತ್ ಜಯ ದಾಖಲಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.

- Advertisement -


ವಿಕೆಟ್ ಕೀಪರ್ ಜಾಸ್ ಬಟ್ಲರ್ 207 ಎಸೆತಗಳನ್ನು ಎದುರಿಸಿ ಪಂದ್ಯವನ್ನು ಡ್ರಾ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಕ್ರಿಸ್ ವೋಕ್ಸ್ ಹೊರತುಪಡಿಸಿದರೆ ಉಳಿದ ಬ್ಯಾಟರ್’ಗಳು ಕ್ರೀಸ್’ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಧೈರ್ಯ ಮಾಡಲಿಲ್ಲ. 207 ಎಸೆತಗಳನ್ನು ಎದುರಿಸಿ 26 ರನ್’ಗಳಿಸಿ ಆಸ್ಟ್ರೇಲಿಯಾ ಬೌಲರ್’ಗಳಿಗೆ ಸವಾಲಾಗಿದ್ದ ಬಟ್ಲರ್, ಕೊನೆಗೆ ಹಿಟ್ ವಿಕೆಟ್ ಆಗಿ ಔಟ್ ಆಗಿದ್ದು ಮಾತ್ರ ವಿಪರ್ಯಾಸ. ಮತ್ತೊಂದೆಡೆ 97 ಎಸೆತಗಳೆದುರು 44 ರನ್ ಗಳಿಸಿದ್ದ ಕ್ರಿಸ್ ವೋಕ್ಸ್, ರಿಚರ್ಡ್ಸನ್ ಬೌಲಿಂಗ್ ಬೌಲ್ಡ್ ಆಗಿ ಮರಳಿದರು.

ಆಸ್ಟ್ರೇಲಿಯಾ ಪರ ಜೇ ರಿಚರ್ಡ್ಸನ್ 5 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಹಾಗೂ ನೇಥನ್ ಲಿಯಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್’ನಲ್ಲಿ ಅಮೋಘ ಶತಕ ಹಾಗೂ ದ್ವಿತೀಯ ಇನ್ನಿಂಗ್ಸ್’ನಲ್ಲಿ ಅರ್ಧ ಶತಕ ದಾಖಲಿಸಿದ್ದ ಮಾರ್ನಸ್ ಲಾಬುಶೇನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
5 ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಡಿಸೆಂಬರ್ 26ರಿಂದ ಆರಂಭವಾಗಲಿದೆ. ಸರಣಿಯನ್ನು ಜೀವಂತವಾಗಿರಸಬೇಕಾದರೆ 3ನೇ ಟೆಸ್ಟ್’ನಲ್ಲಿ ಇಂಗ್ಲೆಂಡ್’ಗೆ ಗೆಲುವು ಅನಿವಾರ್ಯವಾಗಿದೆ.

Join Whatsapp