ಮಂಗಳೂರು ವಿವಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಅವ್ಯವಹಾರ| ಸಮಗ್ರ ತನಿಖೆಗೆ ಕ್ಯಾಂಪಸ್ ಫ್ರಂಟ್ ಒತ್ತಾಯ

Prasthutha: December 20, 2021

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.

 ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 330 ಲ್ಯಾಪ್‌ಟಾಪ್ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆದಿತ್ತು, ಆದರೆ ಅದನ್ನು ಬದಿಗೊತ್ತಿ ಕುಲಪತಿಗಳು ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್‌ಟಾಪ್ ಖರೀದಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು CFI ಆಗ್ರಹಿಸಿದೆ.

ಮಂಗಳೂರು ವಿವಿಯ ಎಸ್‌ಇ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿವಿ ಸಿಂಡಿಕೇಟ್ ಮಂಡಳಿಯ ನಿರ್ಣಯ ಪಡೆದು 2021ರ ಸೆ. 28 ರಂದು ಇ-ಟೆಂಡರ್ ಕರೆಯಲಾಗಿದ್ದು, ಒರ್ಕಿಡ್, ಸಹರಾ, ಯುಕೆ ಇಂಟರ್ನ್ಯಾಷನಲ್ ಸಂಸ್ಥೆ ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಇದರಲ್ಲಿ‌ ಸಾಯಿರಾಮ್ ಶೆಟ್ಟಿ‌ ಒಡೆತನದ ಒರ್ಕಿಡ್ ಸಂಸ್ಥೆ ಕನಿಷ್ಠ ದರ 62,950 ರೂ ಅನ್ನು ಅಂಗೀಕರಿಸಿ ಖರೀದಿ ಸಮಿತಿ‌ ಸಭೆಗೆ ಮಂಡಿಸಲಾಗಿತ್ತು. ಲ್ಯಾಪ್‌ಟಾಪ್ ಖರೀದಿಗೆ ವಿವಿ ಸಿಂಡಿಕೇಟ್ ಮಂಡಳಿ ನಿರ್ಣಯ ಪಡೆದು ಟೆಂಡರ್ ಕಾರ್ಯ ಪೂರ್ಣಗೊಂಡರೂ ವಿವಿ‌ ಕುಲಪತಿ ಮಾತ್ರ ಸಿಂಡಿಕೇಟ್ ನಿರ್ಣಯ ಪಡೆಯದೆಯೇ ಏಕಾಏಕಿ ಒರ್ಕಿಡ್ ಸಂಸ್ಥೆಗೆ ನೀಡಿದ ಟೆಂಡರ್‌ ಹಿಂಪಡೆದು ಕಿಯೋನಿಕ್ಸ್ ಜೊತೆ ನೇರವಾಗಿ ಲ್ಯಾಪ್‌ಟಾಪ್ ಖರೀದಿ ನಡೆಸಿದ್ದಾರೆ.

ಒಂದು ಲ್ಯಾಪ್‌ಟಾಪ್ ಬೆಲೆ 99,750 ರೂ ನಂತೆ ಒಟ್ಟು 330 ಲ್ಯಾಪ್‌ಟಾಪ್ ಖರೀದಿಸಲು ವಿವಿ ಉಪಕುಲಪತಿ ಮತ್ತು ಕೆಲವು ಸಿಂಡಿಕೇಟ್ ಸದಸ್ಯರು ನಿರ್ಣಯ ತೆಗೆದಿದ್ದಾರೆ ಎನ್ನುವ ಆರೋಪವಿದ್ದು, ನವೆಂಬರ್ ಆರಂಭದಲ್ಲಿ ನೂರು ಲ್ಯಾಪ್‌ಟಾಪ್ ಖರೀದಿಸಿ ಸ್ನಾತಕೋತ್ತರ ಮಕ್ಕಳಿಗೆ ವಿತರಿಸಿದ್ದಾರೆ ಎನ್ನಲಾಗಿದೆ. ಈ ಹಿಂದಿನ‌ ಟೆಂಡರ್ ಯಾಕೆ ರದ್ದಾಯಿತು ಎನ್ನುವುದಕ್ಕೆ ಲ್ಯಾಪ್‌ಟಾಪ್ ಕೀ ಬೋರ್ಡ್ ನಲ್ಲಿ ಲೈಟ್ ಬ್ರೈಟ್ ಇಲ್ಲ ಎಂಬ ಕ್ಷುಲ್ಲಕ ಕಾರಣವನ್ನು ವಿವಿಯ ತಾಂತ್ರಿಕ ಸಮಿತಿ ನೀಡಿದೆ. ಈ ಬಗ್ಗೆ ಆರ್ಕೆಡ್ ಸಂಸ್ಥೆಯು ತಾನು ಬಿಡ್ ಮಾಡಿದ್ದ 62,950 ರೂ‌ ಕನಿಷ್ಠ ದರದಲ್ಲೇ ಕೀ ಬೋರ್ಡ್ ಬ್ರೈಟ್ ಲೈಟ್ ಅಳವಡಿಸಿ ನೀಡುವುದಾಗಿ ತಿಳಿಸಿದರೂ ವಿವಿ ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕೇವಲ‌ 62,950 ರೂ ಬೆಲೆಯ ಲ್ಯಾಪ್‌ಟಾಪ್ ಅನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750 ರೂ ಕೊಟ್ಟು ಖರೀದಿಸಿರುವುದು ಅಕ್ರಮವಾಗಿದ್ದು, ಒಂದು ಬಾರಿ ಸಿಂಡಿಕೇಟ್ ನಿರ್ಣಯ ಪಡೆದು ಕನಿಷ್ಠ ದರ ಪಟ್ಟಿ ಅಂಗೀಕರಿಸಿ, ಬಳಿಕ‌ ಏಕಾಏಕಿ ಸಿಂಡಿಕೇಟ್ ಸಮಿತಿಯ ಗಮನಕ್ಕೇ ಬಾರದೆ ಟೆಂಡರ್ ರದ್ದುಗೊಳಿಸಿ ಹಿಂಬಾಗಿಲಿನ ಮೂಲಕ ಅವ್ಯವಹಾರ ನಡೆಸಿದ್ದು, ಇದನ್ನು ಸಮಗ್ರ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!