ನೋಟು ಅಮಾನ್ಯ ಎಂಬ ಐತಿಹಾಸಿಕ ಪ್ರಮಾದಕ್ಕೆ ಕ್ಷಮೆಯಾಚನೆ ಎಂದು ?

Prasthutha|

ಸ್ವತಂತ್ರ್ಯ ಭಾರತದ ಅತ್ಯಂತ ಮೂರ್ಖತನದ ತೀರ್ಮಾನ ಎಂಬ ಕುಖ್ಯಾತಿಗೆ ಒಳಗಾಗಿರುವ, ಲಕ್ಷಾಂತರ ಉದ್ದಿಮೆ, ಕೋಟ್ಯಂತರ ಪ್ರಜೆಗಳ ಬದುಕನ್ನು ನಾಶ ಮಾಡಿದ ನೋಟು ಅಮಾನ್ಯೀಕರಣ ಎಂಬ ಐತಿಹಾಸಿಕ ಪ್ರಮಾದಕ್ಕೆ 5 ವರ್ಷಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ ತಿಂಗಳ 8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದಾಗ ನೀಡಿದ್ದ ಕಾರಣಗಳು ಹಾಸ್ಯಾಸ್ಪದವಾಗಿದ್ದವು ಎಂಬುದು ಈಗ ಸಾಬೀತಾಗಿವೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕೈಗೊಂಡ ನೋಟು ಅಮಾನ್ಯೀಕರಣದಿಂದ ದೇಶದ ಅರ್ಥಿಕತೆ ನಿರಂತರವಾಗಿ ಕುಸಿಯುತ್ತಲೇ ಹೋಯಿತು. ಅದರ ದುಷ್ಪರಿಣಾಮದಿಂದ ತತ್ತರಿಸಿದ ದೇಶದ ಸಾಮಾನ್ಯ ಜನತೆಗೆ ಅದರಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ.

- Advertisement -


ಕಪ್ಪು ಹಣ ಪತ್ತೆ, ಭಯೋತ್ಪಾದನೆಗೆ ಕಡಿವಾಣ, ಡಿಜಿಟಲೀಕರಣಕ್ಕೆ ಉತ್ತೇಜನ, ಭ್ರಷ್ಟಾಚಾರ ತಡೆ ಮುಂತಾದ ಕಾರಣಗಳನ್ನು ಮುಂದಿಟ್ಟು ರಾತ್ರೋರಾತ್ರಿ ನೋಟು ರದ್ದತಿ ಮಾಡಲಾಗಿತ್ತು. ನೋಟು ನಿಷೇಧದ ಬಳಿಕ ಭಾರತದ ಅರ್ಥಿಕತೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಮೌಲ್ಯಮಾಪನವನ್ನೂ ಮಾಡದೆ ನಡೆಸಿದ ಈ ತೀರ್ಮಾನದಿಂದ ದೇಶಕ್ಕಾದ ಲಾಭವೇನು ಎಂದು ಅಧ್ಯಯನ ಮಾಡಿದಾಗ ಅನಾನುಕೂಲವೇ ಹೆಚ್ಚು ಎಂಬುದು ಬೆಳಕಿಗೆ ಬಂದಿದೆ. ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ ನಿಂತಿದೆ ಎಂದು ಹೇಳುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ. ವಾಸ್ತವದಲ್ಲಿ ಹಿಂದೆಂದಿಗಿಂತಲೂ ಮೋದಿ ಆಡಳಿತದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಹೆಚ್ಚಾಗಿದೆ. ಚೀನಾ, ಪಾಕಿಸ್ತಾನದ ಉಪಟಳ ತೀವ್ರಗೊಂಡಿದೆ. ಕಪ್ಪುಹಣವನ್ನು ತಡೆಗಟ್ಟುವ ಉದ್ದೇಶವು ವಿಫಲವಾಗಿರುವುದು ಸ್ಪಷ್ಟವಾದೊಡನೆಯೇ ಸರ್ಕಾರವು ನೋಟು ನಿಷೇಧದ ನಿಜವಾದ ಉದ್ದೇಶವು ಭಯೋತ್ಪಾದನೆ ಮತ್ತು ಡಿಜಿಟಲ್ ಪಾವತಿ ಪ್ರವೃತ್ತಿಯನ್ನು ಹೆಚ್ಚಿಸುವುದಾಗಿತ್ತು ಎಂದು ಹೇಳುತ್ತಿದೆ. ದೇಶವೇ ಕಂಡು ಕೇಳರಿಯದ ಭಯೋತ್ಪಾದನೆ ಕೃತ್ಯ ಪುಲ್ವಾಮ ದಾಳಿ ನಡೆದದ್ದು ನೋಟು ನಿಷೇಧದ ಬಳಿಕವೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈಗಲೂ ನಿತ್ಯ ಉಗ್ರರ ದಾಳಿ ನಡೆಯುತ್ತಲೇ ಇದೆ. ಡಿಜಿಟಲ್ ಪಾವತಿ ಉದ್ದೇಶ ಈಡೇರಿತೇ ಎಂದರೆ ಅದೂ ಇಲ್ಲ. ಅಕ್ಟೋಬರ್ 8, 2021ಕ್ಕೆ ಕೊನೆಗೊಂಡ ಪಾಕ್ಷಿಕಕ್ಕೆ 28.30 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕವಾಗಿ ಹಣ ಚಲಾವಣೆಯಲ್ಲಿ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳುತ್ತಿದೆ. ಅಂದರೆ ಜನರ ವ್ಯವಹಾರದಲ್ಲಿ ಪಾವತಿಗೆ ಇವತ್ತಿಗೂ ನಗದು ಆದ್ಯತೆಯಾಗಿದೆ ಎಂಬುದು ಸಾಬೀತಾಗಿದೆ. ನವೆಂಬರ್ 4, 2016ರಲ್ಲಿ ಚಲಾವಣೆಯಲ್ಲಿ ಇದ್ದ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿಯಾದರೆ ಈಗ ಅದು ಶೇಕಡಾ 57.48 ಹೆಚ್ಚಾಗಿದೆ. ಅಂದರೆ 10.33 ಲಕ್ಷ ಕೋಟಿ ರೂಪಾಯಿ ಚಲಾವಣೆ ಹೆಚ್ಚಾಗಿದೆ ಎಂಬುದರ ಬಗ್ಗೆ ಅಧ್ಯಯನ ಸಂಸ್ಥೆಗಳು ಬೆಳಕು ಚೆಲ್ಲಿವೆ.


ಡಿಜಿಟಲೀಕರಣಕ್ಕೆ ಉತ್ತೇಜನ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಸಾರ್ವಜನಿಕರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಇಡಲು ಭಯ ಪಡುತ್ತಿದ್ದು, ಹೆಚ್ಚಾಗಿ ನಗದನ್ನೇ ಉಪಯೋಗಿಸುತ್ತಿದ್ದಾರೆ. ನೋಟು ಅಮಾನ್ಯಗೊಂಡಾಗ ಚಲಾವಣೆಯಲ್ಲಿದ್ದ ಶೇಕಡಾ 99.30ರಷ್ಟು ನೋಟುಗಳು ಬ್ಯಾಂಕಿಗೆ ಹಿಂದಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಕಪ್ಪು ಹಣ ಎಲ್ಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಿದೆ.
ಒಟ್ಟಿನಲ್ಲಿ ದೇಶದ ಮೇಲೆ ಅದರಲ್ಲೂ ಬಡಕುಟುಂಬಗಳ ಮೇಲೆ ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡಿದ ನೋಟು ಅಮಾನ್ಯೀಕರಣ ಎಂಬ ಪ್ರಮಾದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಕ್ಷಮೆಯಾಚಿಸದಿರುವುದು ಅವರ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತಿದೆ.

Join Whatsapp