ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಜೈಲನುಭವಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಮಾದಕ ದ್ರವ್ಯ ನಿಯಂತ್ರಣ ಮಂಡಳಿಯ (ಎನ್‌ಸಿಬಿ) ಮುಂದೆ ಹಾಜರಾಗಿದ್ದಾರೆ. ಪ್ರತಿ ಶುಕ್ರವಾರವೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ನಡುವೆ ಆರ್ಯನ್ ಖಾನ್, ಎನ್‌ಸಿಬಿಯ ತನಿಖಾಧಿಕಾರಿಯ ಮುಂದೆ ಹಾಜರಿರಬೇಕು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಹೈಕೋರ್ಟ್ ಷರತ್ತನ್ನು ವಿಧಿಸಿತ್ತು. ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರೆ ಆರೋಪಿಗಳಿಗೂ ಜಾಮೀನು ಮಂಜೂರು ಮಾಡುವ ವೇಳೆ ಇದೇ ಷರತ್ತನ್ನು ವಿಧಿಸಿತ್ತು.
ಆರ್ಥರ್ ಜೈಲಿನಲ್ಲಿ 22 ದಿನಗಳ ಕಾಲ ಜೈಲನುಭವಿಸಿದ್ದ ಆರ್ಯನ್ ಖಾನ್, ಕಳೆದ ಅಕ್ಟೋಬರ್ 30ರಂದು ಜಾಮೀನು ದೊರಕಿ ಹೊರ ಬಂದಿದ್ದರು. ಜಾಮೀನು ವೇಳೆ ಹೈಕೋರ್ಟ್ ನೀಡಿರುವ ಐದು ಪುಟಗಳ ಆದೇಶದಲ್ಲಿ ಒಟ್ಟು 14 ಷರತ್ತುಗಳು ಒಳಗೊಂಡಿದ್ದು, ಆರ್ಯನ್ ತನ್ನ ಪಾಸ್‌ಪೋರ್ಟ್ ಅನ್ನು ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ವಶಕ್ಕೆ ನೀಡುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಅಥವಾ ಇತರೆ ಆರೋಪಿಗಳನ್ನು ಸಂಪರ್ಕಿಸ ಬಾರದು ಹಾಗೂ ಪ್ರತಿ ವಾರವೂ ಎನ್‌ಸಿಬಿ ಕಚೇರಿಯಲ್ಲಿ ಹಾಜರಿರಬೇಕು ಎಂದು ಹೇಳಿತ್ತು.
ಹೈಕೋರ್ಟ್ ವಿಧಿಸಿರುವ ಷರತ್ತುಗಳಲ್ಲೇನಾದರೂ ಉಲ್ಲಂಘನೆಯಾದರೆ, ಜಾಮೀನು ರದ್ದು ಪಡಿಸುವಂತೆ ಕೋರಿ ಎನ್‌ಸಿಬಿ ಮನವಿ ಸಲ್ಲಿಸಲು ಬಾಂಬೆ ಹೈಕೋರ್ಟ್ ಗೆ ಅವಕಾಶವಿದೆ ಎಂದು ಹೇಳಿದೆ.