ಬಂಧಿತ ಎಡಿಜಿಪಿ ಅಮೃತ್ ಪೌಲ್ ತೀವ್ರ ವಿಚಾರಣೆ

Prasthutha|

ಬೆಂಗಳೂರು: 545 ಮಂದಿ ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಬಂಧಿತರಾಗಿರುವ ಎಡಿಜಿಪಿ  ಅಮೃತ್ ಪೌಲ್ ಅವರನ್ನು ಸಿಐಡಿ  ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

- Advertisement -

ಪಿಎಸ್ ಐ ನೇಮಕಾತಿ ಅಕ್ರಮದ ಸಂಬಂಧ ವಿಚಾರಣೆ ನಡೆಸಿ ನಿನ್ನೆ ಬಂಧಿಸಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಸಿಐಡಿ ವಶಕ್ಕೆ ಪಡೆಯಲಾಗಿತ್ತು.

ಪೌಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು, ಸಿಐಡಿ ಕೇಂದ್ರ ಕಚೇರಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.

- Advertisement -

ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ 10.30ರಿಂದ ಸಿಐಡಿಯ ವಿಚಾರಣಾ ಕೊಠಡಿಯಲ್ಲಿ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದು, ಕೆಲ ಪ್ರಶ್ನೆಗಳಿಗೆ ಪೌಲ್ ಅವರು ಉತ್ತರ ನೀಡಿದರೆ, ಮತ್ತೆ ಕೆಲವಕ್ಕೆ ಮೌನ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ಕಳೆದ ಅಕ್ಟೋಬರ್ 3 ರಂದು ಪಿಎಸ್ ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದು ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿದೆ.

ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತು. 545 ಪಿಎಸ್ ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್ಗಳಿಗೂ ಹಣದ ಹೊಳೆ ಹರಿದಿದೆ. ತಿ ಬ್ರೋಕರ್ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್ ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗುತ್ತಿತ್ತು. ಅಷ್ಟೂ ಬ್ರೋಕರ್ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರುತ್ತಿತ್ತು.

 ಈಗಾಗಲೇ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್ ಡಿಎ ಹರ್ಷಾ, ಸಿಬ್ಬಂದಿಗಳಾದ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಹೆಸರು ಕೂಡ ಅಕ್ರಮದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ಎತ್ತಂಗಡಿ ಮಾಡಲಾಗಿತ್ತು.

ಬಂಧನದ ಬೆನ್ನಲ್ಲೇ ಅಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ರಾಜ್ಯ ಸರ್ಕಾರವು ಸೇವೆಯಿಂದ ಅಮಾನತುಗೊಳಿಸಿದೆ.



Join Whatsapp