ಮಂಗಳೂರು: ಎಸ್ ಡಿಪಿಐ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರನ್ನು ಎನ್ಐಎ ದುರುದ್ದೇಶಪೂರ್ವಕವಾಗಿ ಬಂಧಿಸಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಎನ್ಐಎ ತಾರತಮ್ಯ ನೀತಿಯಲ್ಲಿ ತೊಡಗಿದ್ದು, ಅದರ ರಾಜಕೀಯ ಯಜಮಾನರ ಸೇಡಿನ ರಾಜಕೀಯದ ತಾಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದೆ. ಈ ವಿನಾಶಕಾರಿ ವಿದ್ಯಮಾನವು ಸಮಾಜದ ಸ್ವಾಸ್ಥ್ಯ ಕ್ಕೆ ಬಹಳ ಹಾನಿಕಾರಕವಾಗಿದ್ದು ತನಿಖಾ ಸಂಸ್ಥೆಗಳ ಮೇಲಿನ ಜನರು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಎಸ್ ಡಿ ಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಎಸ್ ಡಿಪಿಐ ಪಕ್ಷಕ್ಕೆ ಯಾವುದೇ ರೀತಿಯಿಂದಲೂ ಸಂಬಂಧವಿಲ್ಲದ ಕ್ರಿಮಿನಲ್ ಪ್ರಕರಣದ ತನಿಖೆಯ ನೆಪದಲ್ಲಿ ಎನ್ಐಎ ಸಂಸ್ಥೆ ಎಸ್ ಡಿಪಿಐ ಪಕ್ಷದ ಮುಖಂಡರನ್ನು ಬೇಟೆಯಾಡುತ್ತಿದೆ ಎಂದು ಇಲ್ಯಾಸ್ ತುಂಬೆ ಅವರು ಆರೋಪಿಸಿದ್ದು, ಕೇಂದ್ರದ ಬಿಜೆಪಿ ಆಡಳಿತದ ಈ ಬಂಧನ ಹತಾಶೆಯಿಂದ ಕೂಡಿದೆ ಎಂದು ಹೇಳಿದರು.
ಎಸ್ ಡಿಪಿಐ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಮತ್ತು ಎನ್ಐಎಯಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದೆ. ಇಂತಹ ಬೆದರಿಕೆಗಳಿಗೆ ಹೆದರಿ ಎಸ್ ಡಿಪಿಐ ಪಕ್ಷ ಎಂದಿಗೂ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಜನರ ಹಕ್ಕು ಮತ್ತು ಸ್ವಾತಂತ್ರ್ಯ ವನ್ನು ರಕ್ಷಿಸುವ ದೃಢವಾದ ಹೋರಾಟವಾಗಿ ನಮ್ಮ ಪಕ್ಷ ಉಳಿಯುತ್ತದೆ ಎಂದು ಈ ಸಂದರ್ಭದಲ್ಲಿ ಇಲ್ಯಾಸ್ ತುಂಬೆ ಹೇಳಿದರು.