40 ಯೋಧರ ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ಅರ್ನಾಬ್ ಗೋಸ್ವಾಮಿ ಸಂಭ್ರಮಿಸಿದ್ದರೇ? : ವಾಟ್ಸಪ್ ಚಾಟ್ ವೈರಲ್

Prasthutha|

ಮುಂಬೈ : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಆರೋಪಿತನಾಗಿರುವ ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದ ಅಚ್ಚರಿದಾಯಕ ಮಾಹಿತಿಗಳು ದಿನದಿಂದ ದಿನಕ್ಕೆ ಹೊರಬೀಳುತ್ತಿವೆ. ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವೆ ನಡೆದಿದೆ ಎನ್ನಲಾದ ವಾಟ್ಸಪ್ ಚಾಟ್ ಸಂದೇಶಗಳ ಟ್ರಾನ್ಸ್ ಕ್ರಿಪ್ಟ್ ನಲ್ಲಿ ಬಹಿರಂಗಗೊಂಡ ಅಂಶಗಳು ದೇಶವನ್ನೇ ಬೆಚ್ಚಿ ಬೀಳಿಸುವಂತಿವೆ.

- Advertisement -

ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿರುವ 3,400 ಪುಟಗಳ ಪೂರಕ ಚಾರ್ಜ್ ಶೀಟ್ ನಲ್ಲಿ ಅರ್ನಾಬ್ ಅವರದ್ದೆಂದು ಹೇಳಲಾದ 500 ಪುಟಗಳ ವಾಟ್ಸಪ್ ಸಂದೇಶದ ದಾಖಲೆ ಸೋರಿಕೆಯಾಗಿದೆ ಎನ್ನಲಾಗುತ್ತಿದೆ.   

2019, ಫೆ.14ರಂದು ಪುಲ್ವಾಮದಲ್ಲಿ 40 ಯೋಧರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ದಿನ ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿದ್ದರೆ, ಆತಂಕಕ್ಕೆ ತುತ್ತಾಗಿದ್ದರೆ ಗೋಸ್ವಾಮಿ ಮಾತ್ರ ಅದನ್ನು ಸಂಭ್ರಮಿಸಿದ್ದಾರೆನ್ನೆಲಾದ ವಾಟ್ಸಪ್ ಚಾಟ್ ಸಂದೇಶವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹಲವು ಪ್ರಮುಖ ಸಾಮಾಜಿಕ ಕಾರ್ಯಕರ್ತರೂ ಈ ಸಂದೇಶದ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡು, ಗೋಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

2019, ಫೆ.14ರ ಮಧ್ಯಾಹ್ನ ಪುಲ್ವಾಮದಲ್ಲಿ ಉಗ್ರರ ದಾಳಿಯಾಗಿ 40 ಯೋಧರು ಬಲಿಯಾಗಿದ್ದರೆ, ಸಂಜೆ ವೇಳೆ ಗೋಸ್ವಾಮಿ “ನಾವು ಈ ದಾಳಿಯನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದೇವೆ” ಎಂದು ವಾಟ್ಸಪ್ ಸಂದೇಶದಲ್ಲಿ ತಿಳಿಸಿದ್ದರು!. ಅಲ್ಲದೆ, ಬಾಲಾಕೋಟ್ ವಾಯುದಾಳಿ ನಡೆಯುವುದಕ್ಕಿಂತ ಮೂರು ದಿನಗಳ ಮುಂಚೆಯೇ “ಬಿಗ್ಗರ್ ದ್ಯಾನ್ ಎ ನಾರ್ಮಲ್ ಸ್ಟ್ರೈಕ್” (ಸಾಮಾನ್ಯ ದಾಳಿಗಿಂತ ದೊಡ್ಡ ದಾಳಿ) ನಡೆಯಲಿದೆ ಎಂದು ಗೋಸ್ವಾಮಿ ಅಭಿಪ್ರಾಯ ಪಟ್ಟಿದ್ದರು.

ಬಾಲಾಕೋಟ್ ದಾಳಿ ವಿಷಯ ಮೂರು ದಿನಗಳಿಗೆ ಮೊದಲೇ ಗೋಸ್ವಾಮಿಗೆ ಹೇಗೆ ಗೊತ್ತಾಯಿತು? ಸೇನೆಯ ಗೌಪ್ಯ ವಿಚಾರಗಳು ಬಹಿರಂಗವಾಗುವುದು ಗಂಭೀರ ಅಪರಾಧವಾಗಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಒತ್ತಾಯ ಕೇಳಿಬರುತ್ತಿದೆ.



Join Whatsapp