ನಕಲಿ ಎನ್ ಕೌಂಟರ್ ನಡೆಸಿದ ಸೇನಾ ಕ್ಯಾಪ್ಟನ್’ಗೆ ಜೀವಾವಧಿ ಶಿಕ್ಷೆ ವಿಧಿಸಿದ ಸೇನಾ ಕೋರ್ಟ್

Prasthutha|

ಕಾಶ್ಮೀರ: ಕಾಶ್ಮೀರದ ಅಂಶಿಪೋರಾದಲ್ಲಿ ನಕಲಿ ಎನ್ ಕೌಂಟರ್ ನಡೆಸಿದ್ದ ಸೇನಾ ಕ್ಯಾಪ್ಟನ್’ಗೆ ಜೀವಾವಧಿ ಶಿಕ್ಷೆ ವಿಧಿಸಿ ಸೇನಾ ಕೋರ್ಟ್ ತೀರ್ಪು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಮೂವರು ಯುವಕರು ಈ ಎನ್ ಕೌಂಟರಿಗೆ ಬಲಿಯಾಗಿದ್ದರು. 2020ರ ಜುಲೈ 18ರಂದು ಉಗ್ರರೊಡನೆ ಕದನ ನಡೆಸಿದ ಬಳಿಕ ಮೂವರು ನಾಗರಿಕರನ್ನು ಎನ್ ಕೌಂಟರ್ ಮಾಡಿ ಕೊಲ್ಲಲಾಗಿತ್ತು.
ಭಾರತೀಯ ಸೇನೆಯ ದಕ್ಷಿಣ ಕಾಶ್ಮೀರದ ಸೋಪಿಯಾನ್’ನಲ್ಲಿ ನೆಲೆಯಾಗಿರುವ 62ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದ ಕಾಯ್ದೆಯನ್ನು ದುರುಪಯೋಗಿಸಿ ಈ ಎನ್ ಕೌಂಟರ್ ನಡೆಸಿರುವುದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ಒಂದು ವರ್ಷದ ಬಳಿಕ ಈ ಕೊಲೆ ನಡೆದಿದೆ.

- Advertisement -


ಉನ್ನತ ಮಿಲಿಟರಿ ಅಧಿಕಾರಿಗಳು ವಿಷಯವನ್ನು ಖಚಿತ ಪಡಿಸಿಕೊಂಡ ಮೇಲೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದು, ಇದರ ಕೆಲವು ಪ್ರಕ್ರಿಯೆ ಇನ್ನೂ ಕೋರ್ಟ್ ಮಾರ್ಷಲ್’ನಲ್ಲಿ ಮುಂದುವರಿದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಶಿಕ್ಷೆಯ ಸುದ್ದಿ ನನಗೆ ಸಮಾಧಾನ ತಂದಿದೆ ಎಂದು ರಾಜೌರಿ ಜಿಲ್ಲೆಯ ಕೊಲೆಯಾಗಿದ್ದ 25ರ ಅಬ್ರಾರ್ ಅಹಮದ್ ಅವರ ತಂದೆ ಮುಹಮದ್ ಯೂಸುಫ್ ತಿಳಿಸಿದ್ದಾರೆ. “ಆ ದಿನ ಮೂವರು ಯುವಕರ ರಕ್ತವನ್ನು ಚೆಲ್ಲಲಾಗಿತ್ತು. ಅವರನ್ನು ಉಗ್ರರು ಎಂದು ಹಣೆಪಟ್ಟಿ ಕಟ್ಟಲು ಸೇನೆ ಪ್ರಯತ್ನಿಸಿತ್ತು. ಆದರೆ ಸತ್ಯ ಕೊನೆಗೂ ಹೊರ ಬಿದ್ದಿದೆ” ಎಂದು ಅವರು ಹೇಳಿದರು.
19ರ ಹರೆಯದ ಇಮ್ತಿಯಾಝ್ ಅಹ್ಮದ್ ಮತ್ತು 16ರ ಹರೆಯದ ಮುಹಮ್ಮದ್ ಅಬ್ರಾರ್ ಸೇನೆಯಿಂದ ಹತ್ಯೆಯಾದ ಬಾಲಕರು. ಇವರಿಬ್ಬರೂ 12ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ನಮ್ಮ ಸಂಸಾರದ ಭಾರ ಮುಂದೆ ಹೊರುತ್ತಾನೆ ಎಂದು ನಾನು ಕೂಲಿ ಮಾಡಿ ಓದಿಸುತ್ತಿದ್ದೆ ಎಂದು ಇಮ್ತಿಯಾಝ್ ಅವರ ತಂದೆ ಶಬೀರ್ ಹುಸೇನ್ ಹೇಳಿದರು.


“ನನ್ನ ಹಿರಿಯ ಮಗ ಅವಿದ್ಯಾವಂತ. ಇಮ್ತಿಯಾಝ್ ಕೊಲೆಯಿಂದ ನಾನು ಎಲ್ಲವನ್ನೂ ಕಳೆದುಕೊಂಡೆ. ಕ್ಯಾಪ್ಟನ್’ಗೆ ಜೀವಾವಧಿ ಶಿಕ್ಷೆ ಒಂದಷ್ಟು ನೆಮ್ಮದಿ ತಂದಿದೆ. ಮಗನ ಸಾವಿನ ಬಳಿಕ ನಾನು ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ. ಇನ್ನು ನನ್ನ ಹೃದಯ ಸ್ವಲ್ಪವಾದರೂ ವಿಶ್ರಾಂತಿ ಪಡೆದೀತು” ಎಂದು ಶಬೀರ್ ಹುಸೇನ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಸೇನೆಯು ತನಿಖೆ ನಡೆಸಿ ಈಗಾಗಲೇ ಮೂವರನ್ನು ಬಂಧಿಸಿದೆ. ಸೋಪಿಯಾನ್ ನಿವಾಸಿ ನಾಗರಿಕ ಸೇನಾ ಮಾಹಿತಿದಾರ ತಬೀಶ್ ನಜೀರ್ ಮಲಿಕ್, ಇನ್ನೊಬ್ಬ ಈಗ ಈ ಮೊಕದ್ದಮೆಯಲ್ಲಿ ಎಪ್ರೂವರ್ ಆಗಿ ಬದಲಾಗಿರುವ ಪುಲ್ವಾಮಾದ ಬಿಲಾಲ್ ಲೋನ್.
ಕೊಲೆಯಾದವರು 2020ರ ಕೋವಿಡ್ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಕೆಲಸ ಹುಡುಕುತ್ತ ಸೋಪಿಯಾನಿನ ಚೌಗಾಮ್ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಬಾಡಿಗೆಗೆ ಒಂದು ಕೋಣೆ ಪಡೆದ ಅವರು ನಾಪತ್ತೆಯಾಗಿದ್ದರು.
ಪೊಲೀಸರು 1,400 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪಿ ತಬೀಶ್ ಎಂಬಾತನ ತಂದೆ ಬಿಜೆಪಿ ಟಿಕೆಟ್’ನಲ್ಲಿ ನಗರ ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಿ ಸೋತಿದ್ದರು. 2020ರ ಜು. 17ರಂದು ಬಿಲಾಲ್ ಆ ಮೂವರನ್ನು ಬಾಡಿಗೆಗೆ ಹಿಡಿದಿದ್ದ ಕೋಣೆಯಿಂದ ಅಪಹರಿಸಿದ್ದ. ಹಣಕಾಸಿನ ಲಾಭಕ್ಕಾಗಿ ಆರೋಪಿಗಳು 2020ರ ಜು. 18ರ ಮುಂಜಾನೆ ಅಂಶಿಪೋರಾದ ತೋಟವೊಂದರ ಹಳೆಯ ಕಟ್ಟಡದಲ್ಲಿ ಎನ್ ಕೌಂಟರ್ ಮಾಡಿದ್ದರು.

- Advertisement -


ಚೌಗಾಮ್’ಗೆ ಬಂದಾಗ ಕ್ಯಾಪ್ಟನ್ ಸಿಂಗ್ ಸ್ಥಳೀಯ ಮುಸ್ಲಿಮರ ಸಂಪರ್ಕ ಹೊಂದಲು ತನ್ನ ಹೆಸರನ್ನು ಅಸ್ಲಾಮ್ ಎಂದು ಹೇಳಿಕೊಂಡಿದ್ದರು. ಪೊಲೀಸ್ ತನಿಖೆಯಂತೆ ತಬೀಶ್ ಅವರ ಮಾಹಿತಿದಾರರಲ್ಲಿ ಒಬ್ಬರು. ಎನ್ ಕೌಂಟರ್ ಬಳಿಕ ಯುವಕರಿಂದ ಭಾರೀ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಕ್ಯಾಪ್ಟನ್ ಹೇಳಿದ್ದರು.
ಆದರೆ ಪೊಲೀಸರ ತನಿಖೆಯಲ್ಲಿ ಇವೆಲ್ಲಾ ಸುಳ್ಳು ಎಂಬುದು ಬೆಳಕಿಗೆ ಬಂದಿದೆ. ಸೇನೆಯ ಆದೇಶ ಅನಂತರ ಸೇರಿಸಲಾಗಿದೆ. ಕೊಲೆ ಮಾಡಲಾದ ಮೂವರು ಯುವಕರ ಶವಗಳನ್ನು ಉತ್ತರ ಕಾಶ್ಮೀರದ ಒಂದು ಸ್ಮಶಾನದಲ್ಲಿ ಹೂಳಲಾಗಿತ್ತು. 2020ರ ಅಕ್ಟೋಬರ್ 3ರಂದು ಶವಗಳನ್ನು ಹೊರತೆಗೆದು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.


ಸೇನೆಯವರು ಒಂದು ಬಾಡಿಗೆ ಕ್ಯಾಬ್’ನಲ್ಲಿ ಕೊಲೆಯಾದ ಮೂವರನ್ನು ಅಂಶಿಪೋರಾಕ್ಕೆ 2020ರ ಜು. 17ರಂದು ಕರೆದೊಯ್ದಿದ್ದಾರೆ. ಅದರಲ್ಲಿ ಆಮೇಲೆ ಶಸ್ತ್ರಗಳನ್ನು ಇಟ್ಟು, ಉಗ್ರರೆಂದು ಆರೋಪ ಹೊರಿಸಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸತ್ತವರ ಕುಟುಂಬದವರು ಸೇರಿ ಸಭೆ ನಡೆಸಿ ಮನವಿ ನೀಡಿದ ಒಂದು ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಅದನ್ನು ನಕಲಿ ಎನ್ ಕೌಂಟರ್ ಎಂದು ಹೇಳಿದರು ಎಂದು ಅಬ್ರಾರ್ ತಂದೆ ಯೂಸುಫ್ ತಿಳಿಸಿದರು.
ಕೊಲೆಯಾದವರ ಕುಟುಂಬಗಳಿಗೆ ಉದ್ಯೋಗ ನೀಡುವುದಾಗಿ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಮೂರೂ ಕುಟುಂಬಗಳವರು ಸುತ್ತಿದ್ದೇ ಬಂತು ಹೊರತು ಉದ್ಯೋಗ ದೊರಕಿಲ್ಲ ಎಂದೂ ಅವರು ತಿಳಿಸಿದರು.

Join Whatsapp