ಹಿಂದುತ್ವ ಸಂಘಟನೆಗಳು ಮಕ್ಕಳನ್ನು ಉಗ್ರಗಾಮಿ ಗುಂಪುಗಳನ್ನಾಗಿ ಮಾಡಲು ಹೊರಟಿದ್ದಾರೆಯೇ?: ಕುಮಾರಸ್ವಾಮಿ

Prasthutha|

ಹಾಸನ: ಶಾಲೆಗಳಲ್ಲಿ ಮಕ್ಕಳಿಗೆ ಶಾಸ್ತ್ರಾಭ್ಯಾಸವನ್ನು ನೀಡಲು ಬಜರಂಗದಳದ ಮುಖಂಡರು ಮುಂದಾಗಿದ್ದು, ಏರ್ ಗನ್ ಶಸ್ತ್ರಾಭ್ಯಾಸ ಎಂದು ಹೇಳಿದ್ದಾರೆ. ಹಿಂದೂ ಸಂಘಟನೆಗಳು ಮಕ್ಕಳನ್ನು ಸಹ ಉಗ್ರಗಾಮಿಗಳ ಗುಂಪುಗಳನ್ನಾಗಿ ತಯಾರಿಸಲು ಹೊರಟಿದ್ದಾರೋ? ಅಥವಾ ಸಮಾಜದಲ್ಲಿ ಶಾಂತಿ ಮೂಡಿಸುವ ನಿಟ್ಟಿನಲ್ಲಿ ಉತ್ತೇಜಿಸಲು ಹೊರಟಿದ್ದಾರಾ? ಎನ್ನುವುದನ್ನು ಅವರೇ ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಅರಕಲಗೂಡು ತಾಲ್ಲೂಕಿನ, ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಇಂದು ಮಾತನಾಡಿದರು ಅವರು, ಒಂದು ಕಡೆ ಸಮಾಜದ ಭಾವೈಕ್ಯತೆ ಹಾಗೂ ಸಾಮರಸ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಸಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು, ಇದನ್ನೇ ಗಾಂಧೀಜಿ ಸಹ ಬಯಸಿದ್ದರು. ಶಸ್ತ್ರದಿಂದ ನಮ್ಮ ಹೋರಾಟ ಅಲ್ಲ. ನಮ್ಮ ಹೋರಾಟ ಹಾಗೂ ಜಯಗಳು ನಮ್ಮ ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತದ್ದಾಗಬೇಕು, ಶಾಂತಿಯುತ ಹೋರಾಟದಿಂದ ನಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬೇಕೆ ಹೊರತು ಶಸ್ತ್ರಾಭ್ಯಾಸ ಗಳನ್ನು ಮಾಡಿ ಅಥವಾ ಶಸ್ತ್ರಗಳನ್ನು ಇಟ್ಟುಕೊಂಡು ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದರು ಅವರು.
ಪಠ್ಯಕ್ರಮದ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ಯಾವುದೇ ವಿಚಾರವಿರಲಿ ಮಕ್ಕಳಿಗೆ ಅನುಕೂಲವಾಗುವ ವಿಚಾರಗಳನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು. ಗುಣಾತ್ಮಕವಾದ ಶಿಕ್ಷಣ ಬೇಕು. ಮಕ್ಕಳಿಗೆ ಮೊದಲು ಕಲಿಸಬೇಕಾದ್ದು ಮನುಷ್ಯತ್ವವೇ ಹೊರತು ಯಾವುದೇ ವ್ಯಕ್ತಿಯ ಬಗ್ಗೆ ಅಲ್ಲ. ಹೃದಯ ವೈಶಾಲ್ಯತೆ ಹಾಗೂ ಬದುಕು ಕಲ್ಪಿಸಿಕೊಳ್ಳುವ ಕಲಿಕೆಯನ್ನು ನೀಡಬೇಕು ಎನ್ನುವುದು ನನ್ನ ಆಶಯ ಎಂದು ಹೇಳಿದರು.
ಭಗತ್ ಸಿಂಗ್ ಒಬ್ಬ ದೇಶಪ್ರೇಮಿ, ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತ ವ್ಯಕ್ತಿ. ಅಂತಹವರ ವಿಷಯಗಳನ್ನು ತೆಗೆದು ಹಾಕಿ ಹೆಡಗೇವಾರ್ ಸೇರಿಸಲು ಹೊರಟಿದ್ದಾರೆ. ಗೋಡ್ಸೆ, ಸಾವರ್ಕರ್ ಅಂಥವರ ಪಠ್ಯವನ್ನು ತರುತ್ತಾರೋ ಎಂಬ ಬಿಜೆಪಿಯ ಅಜೆಂಡಾ ನನಗೂ ಗೊತ್ತಿಲ್ಲ. ಇದರಿಂದ ಈ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಆಗುವ ವಾತಾವರಣ ಬಿಜೆಪಿಯವರಿಗೆ ಬೇಕಾಗಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

- Advertisement -

ದಿ ಕಾಶ್ಮೀರ ಪೈಲ್ಸ್ ಚಿತ್ರ ನಿರ್ಮಿಸಿದಿರಿ. ಇದರಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅವಕಾಶ ನೀಡಿದ್ದೀರಾ? ಅಲ್ಲಿನ ರಾಜಕಾರಣಿಗಳು ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ. ಇಲ್ಲಿ ದ್ವೇಷದ ವಾತಾವರಣ ಬಿತ್ತುವ ಕಾರ್ಯವನ್ನು ಮಾಡಬೇಡಿ. ಪ್ರತಿಯೊಬ್ಬರಲ್ಲೂ ಸಹೋದರತ್ವ ಸಾಮರಸ್ಯ ಹಾಗೂ ಭಾವೈಕ್ಯತೆ ಹೇಗಿರಬೇಕು ಎಂಬ ಬಗ್ಗೆ ಗಮನ ನೀಡಿ ಎಂದು ಒತ್ತಾಯ ಮಾಡಿದರು.
ಮರಿತಿಬ್ಬೆಗೌಡಗೆ ಟಾಂಗ್
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿಕೆ, ಈ ಬಗ್ಗೆ ಚರ್ಚೆ ಬೇಡ. ಈ ಬಗ್ಗೆ ಶಾಸಕ ಅನ್ನದಾನಿ ಯವರೇ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ದಲಿತ ಸಮಾಜದ ಯುವಕ ವಾಸಕ್ಕೂ ಮನೆ ಇಲ್ಲದ ವ್ಯಕ್ತಿಯನ್ನು ಪಕ್ಷ ಶಾಸಕರನ್ನಾಗಿ ಆಯ್ಕೆ ಮಾಡಿದೆ. ನಾವೇನು ಅವರನ್ನು ಹಣ ಪಡೆದು ಆಯ್ಕೆ ಮಾಡಿದ್ದೆವಾ? ಎಂದು ಪ್ರಶ್ನಿಸಿದರು.
ಮರಿತಿಬ್ಬೇಗೌಡರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಟಿಕೆಟ್ ನೀಡುವ ಸಂದರ್ಭ ಅವರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಚರ್ಚೆ ಬೇಡ. ಅವರು ಜೆಡಿಎಸ್‌ನಿಂದ ಎಂ.ಎಲ್.ಸಿ. ಆಗಿದ್ದಾರೆ ಡಿಕೆಶಿ ಹೇಗೆ ಬೆಳೆಸುತ್ತಾರೆ. ಅವರು ಹೇಗೆ ಬೆಳೆಸಲು ಸಾಧ್ಯ, ಆ ಟೈಂಗೆ ಹೇಗೆ ಬೇಕು ಹಾಗೆ ಹೇಳಿಕೊಂಡು ಹೋಗುತ್ತಾರೆ ಎಂದರು.
ಹೊರಟ್ಟಿ ಅವರಿಗೆ ಒಳ್ಳೆಯದಾಗಲಿ
ಜೆಡಿಎಸ್ ಪಕ್ಷವನ್ನು ತ್ಯಜಿಸಿರುವ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸುತ್ತೇನೆ. ಅವರು ಪಕ್ಷವನ್ನು ಬಿಟ್ಟರೂ ಸಹ ಜೆಡಿಎಸ್ ಹಾಗೂ ಪಕ್ಷದ ವರಿಷ್ಠ ದೇವೇಗೌಡರ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನು ಆಡಿದ್ದಾರೆ. ಕೆಲವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಎಂದ ಕುಮಾರಸ್ವಾಮಿ ಅವರು, ನಾವು ಮರಿತಿಬ್ಬೇಗೌಡ ರಿಗೆ ಯಾವುದೇ ಕಿರುಕುಳ ನೀಡಿಲ್ಲ. ನೀಡಿದ್ದರೆ ಅವರು ಅದನ್ನು ಹೇಳಿಕೊಳ್ಳಬಹುದಿತ್ತು ಎಂದು ಹೇಳಿದರು.
ಶಾಸಕರಾದ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಮಸ್ವಾಮಿ ಅವರು ನಮ್ಮ ಕುಟುಂಬದ ಹಿರಿಯ ಅಣ್ಣನಂತೆ. ಅವರು ರಾಜಕಾರಣ ಮಾಡಬೇಕಾದರೆ ನಾನಿನ್ನು ರಾಜಕಾರಣಕ್ಕೆ ಬಂದಿರಲಿಲ್ಲ. ಪಕ್ಷ ಬಿಡುತ್ತೇನೆ ಎಂದು ಎಲ್ಲಾದರು ಹೇಳಿದ್ದಾರಾ?. ಅವರು ಜನಗಳ ಮಧ್ಯೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರ ನೇಚರ್ ಬೇರೆ, ಬೇರೆಯವರಿಗೆ ದಯವಿಟ್ಟು ರಾಮಸ್ವಾಮಿ ಅವರನ್ನು ಹೋಲಿಸಬೇಡಿ ಎಂದು ಹೇಳಿದರು.

ಶಿವಲಿಂಗೇಗೌಡ ನಾಳೆ ಬೆಳಿಗ್ಗೆ ಅವರು ನಮ್ಮ ಜೊತೆಯಲ್ಲೇ ಇರಬಹುದು. ಪಕ್ಷ ಬಿಟ್ಟು ಹೋಗುತ್ತೇನೆ ಅಂಥ ಹೇಳಿದ್ದಾರಾ?.
ಅವರ ಭದ್ರತೆಗೆ ಬೇರೆ ಕಡೆ ಓಡಾಡಿಕೊಂಡು ಇರಬಹುದು, ಬೇರೆ ಅರ್ಥ ನಾನು ಕಲ್ಪಿಸಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಆಗಲ್ಲ ಎಂದು ಹೇಳಿದರು.
ಹಾಸನ ಜಿಲ್ಲೆ ರಾಜಕಾರಣದಲ್ಲಿ ರೇವಣ್ಣ ಹಾಗೂ ಶಿವಲಿಂಗೇಗೌಡರು ನಿರಂತರ ಸಂಪರ್ಕದಲ್ಲಿದ್ದಾರೆ. ಅವರವರಲ್ಲಿ ವಿಶ್ವಾಸ ಇದ್ದರೆ ನಾನು ಅದಕ್ಕೆ ಧಕ್ಕೆ ತರಲ್ಲ. ನಾನು ಯಾವಾಗ ಮಾತನಾಡಬೇಕು, ಆಗ ಮಾತನಾಡುತ್ತೇನೆ. ನನ್ನ ಬಂದು ಭೇಟಿ ಆಗಲಿ ಅಂತ ಹೇಳಿದ್ದೇನೆ ಎಂದರು.

Join Whatsapp