ಬಡವರ ವಿರೋಧಿ ಬಜೆಟ್ : ದಿನೇಶ್ ಗೂಳಿಗೌಡ

Prasthutha|

ಬೆಂಗಳೂರು: ಬಡವರಿಗೆ ಉದ್ಯೋಗ ನೀಡುವ ಮೂಲಕ ಬಡತನ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಪ್ರಾರಂಭವಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಈ ಬಾರಿ 25 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಇಳಿಕೆ ಮಾಡಲಾಗಿದೆ. ಈ ಮೂಲಕ ಬಡವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಆದರೆ, ಕಾರ್ಪೋರೇಟ್ ಕ್ಷೇತ್ರದವರನ್ನು ಮೆಚ್ಚಿಸಲು ಅನೇಕ ತೆರಿಗೆ ಕಡಿತಗಳನ್ನು ಸರ್ಕಾರ ಮಾಡಿದೆ. ಇದನ್ನು ನಾವು ಯಾವ ರೀತಿ ಅರ್ಥೈಸಿಕೊಳ್ಳಬೇಕು. ಉದ್ಯೋಗ ಖಾತರಿ ಯೋಜನೆಯಡಿ ಬಡವರಿಗೆ ಮಾತ್ರವಲ್ಲದೆ ಕೃಷಿಕರಿಗೆ ಒಂದು ಹಳ್ಳಿಯ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ, ಈ ಮೂಲಕ ಅಭಿವೃದ್ಧಿಯ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಹಾಗಾಗಿ ಇದು ಬಡವರ ವಿರೋಧಿ ಬಜೆಟ್ ಎಂದು ವಿಧಾನ ಪರಿಷತ್ ಸದಸ್ಯ  ದಿನೇಶ್ ಗೂಳಿಗೌಡ ಟೀಕಿಸಿದ್ದಾರೆ.

- Advertisement -

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಆಹಾರ ಭದ್ರತೆ ಮೇಲಿನ ಸುಂಕ ಇಳಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಬಹಳ ತಪ್ಪು ಹೆಜ್ಜೆ ಇಟ್ಟಿದೆ. ಕಳೆದ ವರ್ಷ ಆಹಾರ ಭದ್ರತೆಗೆ 2.64 ಲಕ್ಷ ರೂಪಾಯಿ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಕೇವಲ 1.46 ಲಕ್ಷ ರೂಪಾಯಿಯನ್ನು ಮೀಸಲಿಟ್ಟಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕರೇ ನಿರ್ಧರಿಸಲಿ ಎಂದು ಹೇಳಿದರು.

ಇನ್ನು ಕೃಷಿ ಕ್ಷೇತ್ರದಲ್ಲೂ ಸಹ ಯಾವುದೇ ಮಹತ್ತರ ಘೋಷಣೆ ಕಂಡಿಲ್ಲ. ರೈತರಿಗೆ ಆಶಾದಾಯಕವಾದ, ಹೇಳಿಕೊಳ್ಳಬಹುದಾದ ಯಾವುದೇ ಕೊಡುಗೆ ಸಿಕ್ಕಿಲ್ಲ. 2022ರ ವೇಳೆಗೆ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿಕೊಳ್ಳುತ್ತಾ ಬಂದಿದ್ದ ಕೇಂದ್ರ ಸರ್ಕಾರದ ಘೋಷಣೆಗಳ ಸ್ಥಿತಿ ಏನಾಯಿತು ಎಂಬ ಬಗ್ಗೆ ಉತ್ತರಿಸಬೇಕಿದೆ. ತೆರಿಗೆ ವಿನಾಯ್ತಿ ಬಗ್ಗೆ ಶ್ರೀಸಾಮಾನ್ಯ ಇಟ್ಟುಕೊಂಡಿದ್ದ ನಿರೀಕ್ಷೆ ಸಹ ಹುಸಿಯಾಗಿದೆ. ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ. ದುಡಿಯುವ ಕೈಗಳಲ್ಲಿ ಹಣ ಉಳಿಕೆಯಾಗಿದ್ದರೆ ಅದರಿಂದ ಕೊಳ್ಳುವಿಕೆ ಶಕ್ತಿ, ಹೂಡಿಕೆಯ ಶಕ್ತಿ ಹೆಚ್ಚುತ್ತದೆ. ಆಮೂಲಕ ಆರ್ಥಿಕಾಭಿವೃದ್ಧಿಯಾಗಲಿದೆ ಎಂಬ ಅಂಶವನ್ನು ಕೇಂದ್ರದ ವಿತ್ತ ಸಚಿವರು ಮರೆತಂತಿದೆ.  ಇನ್ನು ರಾಜ್ಯದಿಂದ 25 ಸಂಸದರನ್ನು ಕೊಟ್ಟಿರುವ ಕರ್ನಾಟಕ್ಕೆ ಯಾವುದೇ ರೀತಿಯ ವಿಶೇಷ ಕೊಡುಗೆ ನೀಡದಿರುವುದೂ ಸಹ ಅಕ್ಷಮ್ಯ. ಜನತೆ ಇದೆಲ್ಲವನ್ನು ಪ್ರಶ್ನೆ ಮಾಡುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.



Join Whatsapp