ಹೊಸ ಕಾನೂನು | ಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವ ರೈತನ ಮೇಲೂ ಕೇಸ್ ಮಾಡಬಹುದು

Prasthutha|

ಬೆಂಗಳೂರು : ಕರ್ನಾಟಕ ರಾಜ್ಯಪಾಲರಿಂದ ಅಂಕಿತ ಪಡೆದಿರುವ ನೂತನ ಜಾನುವಾರು(ಗೋ) ಹತ್ಯೆ ತಡೆ ಸುಗ್ರೀವಾಜ್ಞೆಯ ಪ್ರಕಾರ, ಜಾನುವಾರು ಹತ್ಯೆ ಮಾಡುವವರಿಗೆ ಮಾತ್ರ ಕಠಿಣ ಶಿಕ್ಷೆಯಿರುವುದಲ್ಲ, ಜಾನುವಾರುಗಳ ಮಾರಾಟದಲ್ಲಿ ಭಾಗಿಯಾಗುವವರಿಗೂ ಶಿಕ್ಷೆಯಿದೆ ಎಂದು ‘ಇಂಡಿಯಾ ಟುಮಾರೊ’ ವರದಿ ತಿಳಿಸಿದೆ.

- Advertisement -

ಅಂದರೆ, ಜಾನುವಾರು ಖರೀದಿಸುವವನು ಅದನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಅದನ್ನು ಖರೀದಿಸುತ್ತಿದ್ದಾನೆ ಎಂಬ ಅರಿವಿದ್ದೂ, ಆತನಿಗೆ ಅವುಗಳನ್ನು ಮಾರಿದ್ದರೆ, ಅವುಗಳನ್ನು ಸಾಕುವವನ ವಿರುದ್ಧವೂ ನೂತನ ಕಾನೂನಿನ ಕಲಂ 7 ಮತ್ತು 15ರನ್ವಯ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬಹುದು ಎಂದಿದೆ ಎಂದು ವರದಿ ತಿಳಿಸಿದೆ. ಜಾನುವಾರುಗಳ ಹತ್ಯೆಗೆ ಯತ್ನ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ.

ಜಾನುವಾರುಗಳನ್ನು ಹತ್ಯೆಯ ಉದ್ದೇಶದಿಂದ ಖರೀದಿಸಲಾಗಿದೆ, ಮಾರಾಟ ಮಾಡಲಾಗಿದೆ, ಪ್ರದರ್ಶನಕ್ಕಿಡಲಾಗಿದೆ ಎಂದು ನಂಬುವಂತಿದ್ದರೆ, ಪೊಲೀಸರು ಪರಿಶೀಲಿಸಿ, ಅಂತಹ ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂದು ವರದಿ ತಿಳಿಸಿದೆ.

- Advertisement -

13 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಕೋಣ ಮತ್ತು ಎಮ್ಮೆಗಳನ್ನು ಹತ್ಯೆ ಮಾಡಬಹುದಾಗಿದೆ, ಅದಕ್ಕಿಂತ ಕಡಿಮೆ ವಯಸ್ಸಿನ ಕೋಣ, ಎಮ್ಮೆಗಳನ್ನು ಹತ್ಯೆ ಮಾಡುವುದು ಅಪರಾಧವಾಗಿದೆ.

ಆದಾಗ್ಯೂ, ರಾಜ್ಯದಲ್ಲಿ ಬೀಫ್ ಮಾರಾಟ, ಸಾಗಾಟ, ಖರೀದಿ, ಆಮದು ಮತ್ತು ತಿನ್ನುವ ಬಗ್ಗೆ ಕಾನೂನಿನಲ್ಲಿ ಯಾವುದೇ ಪ್ರಸ್ತಾಪಗಳಿಲ್ಲ ಎಂದು ವರದಿ ತಿಳಿಸಿದೆ.

ನೂತನ ಕಾನೂನಿನ ಪ್ರಕಾರ, ಹತ್ಯೆಗೆ ನಿಷೇಧಿತ ಜಾನುವಾರುಗಳ ಹತ್ಯೆ ಮಾಡಿದರೆ ರೂ. 50,000ದಿಂದ ರೂ. 10 ಲಕ್ಷ ವರೆಗೆ ದಂಡ ವಿಧಿಸಬಹುದಾಗಿದೆ ಮತ್ತು ಮೂರರಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಬಹುದು.



Join Whatsapp