➤ಹಿಜಾಬ್ ವಿಷಯ ಬಂದಾಗ ನೀವು ಕೋಮಾದಲ್ಲಿದ್ದಿರಿ ಎಂದ ಕುಮಾರಸ್ವಾಮಿ
ಹಾಸನ: ಮೊದಲು ನಾನು ಕೇಳಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕೊಡಿ. ನಿಮ್ಮ ಉದ್ದರಿ ಉಪದೇಶ ನನಗೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ಹಾಗೂ ತಮ್ಮ ತಂದೆಯವರ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
“ಸುಳ್ಳುರಾಮಯ್ಯನಿಗೆ ನಾನು ಹೇಳುವುದು ಇಷ್ಟೇ, ನಾನು ಕೇಳಿರುವ ನಾಲ್ಕು ಪ್ರಶ್ನೆಗೆ ಉತ್ತರ ಕೊಡಿ. ಕಾಂಗ್ರೆಸ್ ಪಕ್ಷವನ್ನು ಜನರು ಇಡೀ ದೇಶದಲ್ಲಿ ತಿರಸ್ಕಾರ ಮಾಡಿ ಆಗಿದೆ. ಕರ್ನಾಟಕ ಒಂದರಲ್ಲಿ ಅದು ಏದುಸಿರು ಬಿಡುತ್ತಿದೆ. ಇವರ ಪಕ್ಷದವರೇ ಡಿ.ಜಿ.ಹಳ್ಳಿ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಕೂಡ ಬೆಂಕಿ ಹಚ್ಚಿದರು. ಇವರು ಈ ದೇಶದಲ್ಲಿ ಜಾತ್ಯತೀತತೆ ಉಳಿಸುತ್ತಾರಾ?” ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಆಪರೇಷನ್ ಕಮಲದಿಂದ ಎಷ್ಟು ಹಣ ಪಡೆದಿರಿ?
ಸುಳ್ಳುರಾಮಯ್ಯನನ್ನು ಪದೇ ಪದೆ ಕೇಳಿದ್ದೇನೆ. 2009ರಲ್ಲಿ ಆಪರೇಷನ್ ಕಮಲದ ಕಾರಣಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಂದಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸಲು ಎಷ್ಟು ಹಣ ಸಂದಾಯ ಮಾಡಿಸಿಕೊಂಡಿರಿ. ಕಳೆದ ಹತ್ತು ವರ್ಷದಲ್ಲಿ ಐವತ್ತು ಸಲ ಈ ಪ್ರಶ್ನೆ ಕೇಳಿದ್ದೀನಿ. ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ನೇರ ವಾಗ್ದಾಳಿ ನಡೆಸಿದರು.
ಕಲ್ಲಪ್ಪ ಹಂಡಿಬಾಗ್ ಬಗ್ಗೆ ಯಾಕೆ ಮಾತನಾಡಲ್ಲ ನೀವು. ನಿಮ್ಮ ಕೆಟ್ಟ ಆಡಳಿತದಿಂದ ಕಲ್ಲಪ್ಪ ಹಂಡಿಬಾಗ್ ಸತ್ತಿದ್ದು. ಅವರಿಗೆ ಸಾವಿಗೆ ಕಾರಣರಾದ ಯಾರಿಗೆ ಶಿಕ್ಷೆ ಕೊಟ್ಟರು? ಅರ್ಕಾವತಿ ಕರ್ಮಕಾಂಡ ನಡೆಸಿ ನೂರಾರು ಕೋಟಿ ತಿಂದು ತೇಗಿದರು. ಅದಕ್ಕೆ ಉತ್ತರ ಕೊಟ್ಟಿದ್ದೀರಾ? ಅದಕ್ಕೆ ಉತ್ತರ ಕೊಡದ ನೀವು, ದೇವೇಗೌಡರ ಮೇಲೆ ಆಣೆ ಮಾಡು ಅಂತ ಹೇಳಲು ಯಾವ ಊರ ದಾಸಯ್ಯ? ನಾಲಿಗೆ ಮೇಲೆ ನಿಗಾ ಇಟ್ಟು ಎಚ್ಚರಿಕೆಯಿಂದ ಮತನಾಡಿ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಸಿದ್ದವನದಲ್ಲಿ ಏನು ಮಾಡಿದಿರಿ?
ಪದೇ ಪದೇ ಬಿಜೆಪಿಯ ಬಿಟೀಂ ಅಂತ ಹೇಳುತ್ತಿದ್ದೀರಿ. ಯಾರಿಂದ ಈ ಸರಕಾರ ನಡೆಯುತ್ತಿರುವುದು ‘ಸಿದ್ದವನ’ದಲ್ಲಿ ಕೂತುಕೊಂಡು ಮಾಡಿದಿರಲ್ಲ ಷಡ್ಯಂತ್ರವನ್ನು ಎಂದು ಹರಿಹಾಯ್ದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೂಲ ಕಾರಣ ಸಿದ್ದರಾಮಯ್ಯ ಎಂದು ನೇರ ಆರೋಪ ಮಾಡಿದರು.
ಬಿಜೆಪಿ ಬಗ್ಗೆ ನಾನು ಏಕೆ ಚರ್ಚೆ ಮಾಡಬೇಕು? 150 ಸೀಟ್ ಗೆಲ್ಲುತ್ತೇವೆ ಎಂದು ಭಾಷಣ ಮಾಡಿಕೊಂಡು ಹೋಗುತ್ತಿದ್ದೀರಿ. ಯಾಕೆ, ನಂಬಿಕೆ ಇಲ್ಲವೇ? ಅದಕ್ಕೆ ಈ ನಾಟಕ. ಇವರ ಯೋಗ್ಯತೆ 50-60 ಸೀಟು ಮಾತ್ರ. ಅಲ್ಲಿಗೆ ಬಂದು ನಿಲ್ಲುತ್ತಾರೆ ಇವರು, ಅಷ್ಟೇ. ಮುಂದಿನ ಚುನಾವಣೆಯಲ್ಲಿ ಜನ ಇವರನ್ನು ತಿರಸ್ಕಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕುಮಾರಸ್ವಾಮಿ, ಜೆಡಿಎಸ್ ಪಕ್ಷ ನಮಗೆ ಬೆಂಬಲ ಕೊಡಬೇಕು ಅಂತ ನೀವು ಕೇಳ್ತಿದಿರ ಅಲ್ಲವೇ? ನೀವು 150 ಸ್ಥಾನ ಗೆಲ್ಲುವುದಾದರೆ ನನ್ನ ಬೆಂಬಲನೆ ಯಾರಿಗೂ ಬೇಕಾಗಿಲ್ವಲ್ಲಾ. ಬಿಜೆಪಿ-ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು 150 ಸೀಟ್ ಗೆಲ್ತಿವಿ ಅಂತಾರೆ. ಹೀಗಿದ್ದ ಮೇಲೆ ನನ್ನ ಬೆಂಬಲ ಯಾರಿಗೂ ಬೇಕಿಲ್ಲವಲ್ಲ. ನಾನು ಯಾರಿಗೆ ಬೆಂಬಲ ಕೊಟ್ಟರೆ ಇವರಿಗೆ ಏನು ಆಗಬೇಕು? ಎಂದು ಕೆಂಡಾಮಂಡಲರಾದರು ಕುಮಾರಸ್ವಾಮಿ.
ಯಾರ ಜತೆಯೂ ಮೈತ್ರಿ ಇಲ್ಲ:
ನಾನು ಯಾರ ಜೊತೆ ಆಗಲಿ ಅಥವಾ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಮಿಷನ್ 123 ಇಟ್ಟುಕೊಂಡು ಕಳೆದ ಹತ್ತು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿಪರ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಸ್ವತಂತ್ರವಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿಯನ್ನು ಕಾರ್ಯಕರ್ತರು ಇಟ್ಟುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟರು.
ಪ್ರತಿಪಕ್ಷ ನಾಯಕನ ವಚನಭ್ರಷ್ಟ ಹೇಳಿಕೆಯ ಬಗ್ಗೆಯೂ ಕಿಡಿಕಿಡಿಯಾದ ಮಾಜಿ ಮುಖ್ಯಮಂತ್ರಿಗಳು, ಯಾರು ವಚನ ಭ್ರಷ್ಟ ಆಗಿದ್ದು? ಒಂಭತ್ತು ದಿನ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಯಾವುದೋ ಒಂದು ಅಗ್ರಿಮೆಂಟ್ ಅಂತ ತಂದು ಅದಕ್ಕೆ ಸಹಿ ಹಾಕದೆ ಹಾಳುಮಾಡಿಕೊಂಡಿದ್ದು ಬಿಜೆಪಿಯವರು. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಕೊಟ್ಟ ಅಧಿಕಾರವನ್ನು ಅವರೇ ಹಾಳು ಮಾಡಿಕೊಂಡರು. ನಾನೇಕೆ ವಚನಭ್ರಷ್ಟ ಆಗ್ತಿನಿ? ಪದೇ ಪದೆ ಆ ಮಾತು ಹೇಳುವ ಅವಶ್ಯಕತೆ ಇಲ್ಲ ಎಂದರು.
ಉಂಡ ಮನೆಗೆ ಎರಡು ಬಗೆದವರು:
ಉಂಡ ಮನೆಗೆ ದೋಖಾ ಮಾಡಿ ಹೋದಂತಹ ವ್ಯಕ್ತಿ ನನ್ನ ಬಗ್ಗೆ ಚರ್ಚೆ ಮಾಡ್ತಾರ? ಈ ಪಕ್ಷದಿಂದ ಬೆಳೆದು, ಪಕ್ಷಕ್ಕೆ ಚಾಕು ಹಾಕಿ ಹೋದಂತಹ ವ್ಯಕ್ತಿ ಅವರು. ದಿನ ಬೆಳಗ್ಗೆ ಎಂದು ಜನತಾದಳವನ್ನು ಮುಗಿಸಬೇಕು ಎನ್ನುತ್ತಾರೆ. ಈಗ ಕಾಂಗ್ರೆಸ್ ಪಕ್ಷವನ್ನು ಮುಗಿಸ್ತಿನಿ ಎಂತಾ ಹೇಳುತ್ತಿದ್ದಾರೆ. ಕಾಂಗ್ರೆಸ್ ಸಭೆಯೊಳಗೆ ಮಾತನಾಡಿದ್ದರಲ್ಲ, ಅವರ ಹೃದಯದಲ್ಲಿ ಇರುವುದನ್ನೇ ಅವರು ಹೇಳಿದ್ದಾರೆ. ನಂಜು ಇರುವುದು ಯಾರಿಗೆ ಎಂದು ಕುಮಾರಸ್ವಾಮಿ ಅವರು ಕೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಈ ದೇಶದಲ್ಲಿ ಉಳಿಯಬೇಕೆಂದರೆ ಕಾಂಗ್ರೆಸ್ನ ಕಿತ್ತು ಒಗೆಯಬೇಕು ಅಂತ ಭಾಷಣ ಮಾಡಿದಿರಲ್ಲ ನೀವು. ನಿಮ್ಮ ಹೃದಯದಲ್ಲಿ ಏನಿದೆ ಅನ್ನುವುದು ಹೊರಗೆ ಬಂತಲ್ಲ. ನಿಮ್ಮಂತಹ ವ್ಯಕ್ತಿಯಿಂದ ನಾನು ಪಾಠ ಕಲಿಯಬೇಕಾ?ದೇವೇಗೌಡರ ಮೇಲೆ ಬೇರೆ ಆಣೆ ಮಾಡಬೇಕಾ? ಯಾರಯ್ಯ ನೀನು? ನನ್ನನ್ನು ಆಣೆ ಮಾಡು ಎಂದು ಕೇಳೋಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು ಕುಮಾರಸ್ವಾಮಿ.
ಆರೂವರೆ ಕೋಟಿ ಜನತೆಯ ಮೆಚ್ಚಿಸಲು ಈ ರಾಜಕೀಯದಲ್ಲಿ ಇದ್ದೇನೆ ನಾನು. ಆದರೆ ನೀವು,
ನಮ್ಮ ಅಪ್ಪನ ಹೆಸರು, ನಮ್ಮ ಪಕ್ಷದ ಹೆಸರು ಹೇಳಿಕೊಂಡು ಎಷ್ಟು ದಿನ ರಾಜಕೀಯ ಹೊಟ್ಟೆಪಾಡು ಮಾಡಬೇಕು ಅಂದುಕೊಂಡಿದ್ದೀರಿ? ಬೇರೆ ಕೆಲಸ ಇಲ್ವಾ ಮಾತನಾಡಲು ನಿಮಗೆ? ಬೆಳಗ್ಗೆ ಎದ್ದರೆ ಜೆಡಿಎಸ್, ಬಿಜೆಪಿ ಬಿಟೀಂ ಅನ್ನುವುದು ಚಾಳಿ ಆಗಿಬಿಟ್ಟಿದೆ ಎಂದು ಅವರು ಹೇಳಿದರು.
ಹಿಜಾಬ್ ವಿಷಯ ಬಂದಾಗ ಕೋಮಾದಲ್ಲಿದ್ದಿರಿ:
ಹಿಜಾಬ್ ವಿಷಯ ಬಂದಾಗ ಕೋಮಾದಲ್ಲಿ ಹೋಗಿ ಕೂತಿದ್ದಿರಿ. ನಿಮ್ಮ ಹಿಡನ್ ಅಜೆಂಡಾ ಗೊತ್ತಿದೆ ನನಗೆ. ಸಾಫ್ಟ್ ಹಿಂದುತ್ವ ನಿಮ್ಮದು. ಹಿಜಾಬ್ ಬಗ್ಗೆ ಯಾಕೆ ಮಾತನಾಡಲು ನಿಮಗೆ ಧೈರ್ಯವೇ ಇರಲಿಲ್ಲ. ಈ ಕುಮಾರಸ್ವಾಮಿ ಹೊರಗಡೆ ಬಂದು ಮಾತನಾಡಬೇಕಾಯಿತು. ಹಿಜಾಬ್ ವಿಷಯ ಬಂದಾಗ ನೀವೇನ್ ಮಾತನಾಡಿದ್ದೀರಿ? ನನ್ನ ಬಗ್ಗೆ ಪ್ರಶ್ನೆ ಬಂದಾಗ ಮಾತನಾಡುತ್ತೀರಿ ನೀವು. ಕೊಳೆತು ನಾರುತ್ತಿದೆ ನಿಮ್ಮದೆಲ್ಲವೂ. ನಂಜು ಇರೋದು ನನಗಲ್ಲ, ನಿಮಗೆ ಎಂದು ಸಿದ್ದರಾಮಯ್ಯ ಅವರಿಗೆ ಬಿಸಿ ಮುಟ್ಟಿಸಿದರು ಕುಮಾರಸ್ವಾಮಿ.
ನೀವು ಬೆಳೆದದ್ದು ಜೆಡಿಎಸ್ ನಿಂದ. ಲಕ್ಷಾಂತರ ಕಾರ್ಯಕರ್ತರ ದುಡಿಮೆ ಮೇಲೆ ಬೆಳೆದಿರಿ. ಈಗ ನಮ್ಮ ಪಕ್ಷವನ್ನೇ ಮುಗಿಸುತ್ತೇನೆ ಎಂದು ಹೊರಟ್ಟಿದ್ದಿರಲ್ಲಾ, ಅದು ನಿಮ್ಮಲ್ಲಿರುವ ನಂಜು. ಮೊದಲು ಅದನ್ನು ಸರಿ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.