ದಿಲ್ಲಿ ಸುಲ್ತಾನ್’ಪುರಿ ಅಪಘಾತ ಪ್ರಕರಣಕ್ಕೆ ಮತ್ತೊಂದು ತಿರುವು

Prasthutha|

ನವದೆಹಲಿ: ಮಹಿಳೆಯನ್ನು ನಾಲ್ಕು ಕಿ.ಮೀ. ಎಳೆದೊಯ್ದ ದಿಲ್ಲಿ ಸುಲ್ತಾನ್ ಪುರಿ ಅಪಘಾತ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

- Advertisement -

“ಕಾರಿಗೆ ಏನೋ ಆಯಿತು ಎಂದು ನಾನು ಹೇಳಿದರೂ, ಇತರರು ನನ್ನ ಬಾಯಿ ಮುಚ್ಚಿಸಿ ಕಾರು ಮುಂದಕ್ಕೋಡಿಸುವಂತೆ ಮಾಡಿದರು” ಎಂದು ವಿಚಾರಣೆ ವೇಳೆ ಕಾರಿನ ಚಾಲಕ ಹೇಳಿದ್ದು, ಪ್ರಕರಣ ಮತ್ತೊಂದು ತಿರುವು ಪಡೆಯಲು ಕಾರಣವಾಗಿದೆ.

“ಏನೂ ಇಲ್ಲ ಕಾರು ಓಡಿಸು ಎಂದು ಅವರೆಲ್ಲ ನನ್ನನ್ನು ಸುಮ್ಮನಾಗಿಸಿದರು” ಎಂದು ಕಾರು ಚಾಲಕ ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾಗಿ ವರದಿಯಾಗಿದೆ.

- Advertisement -

 ಭೀಬತ್ಸ ಸಾವು ಕಂಡ ತರುಣಿ 20ರ ಹರೆಯದ ಅಂಜಲಿ ಸಿಂಗ್ ಎಂದು ಗುರುತಿಸಲಾಗಿದೆ.

 ಹೊಸ ವರ್ಷವಾದುದರಿಂದ ನಾವು ಆಗ ಹೆಚ್ಚಾಗಿಯೇ ಮದ್ಯ ಪಾನ ಮಾಡಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಯವ್ಯ ದಿಲ್ಲಿಯ ಸುಲ್ತಾನ್ ಪುರಿಯಲ್ಲಿ ರಾತ್ರಿ ಅಪಘಾತ ನಡೆದಿದ್ದು, 4 ಕಿಲೋಮೀಟರ್ ದೂರ ಕಂಜಾವಾಲದವರೆಗೆ ಮಹಿಳೆಯ ದೇಹ ಎಳೆದೊಯ್ಯಲಾಗಿದೆ.  ಕಾರಿನಲ್ಲಿದ್ದವರು ಅಮಿತ್ ಖನ್ನಾ, ಮನೋಜ್ ಮಿತ್ತಲ್, ಕ್ರಿಶನ್ ಮತ್ತು ಮಿಥುನ್; ಕಾರು ಓಡಿಸುತ್ತಿದ್ದುದು ದೀಪಕ್ ಖನ್ನಾ. ಕಂಜಾವಾಲದ ಜಾಂಟಿ ಗ್ರಾಮದ ತಿರುವಿನಲ್ಲಿ ಕಾರು ತಿರುಗಿಸುವಾಗ ಚಾಲಕ ದೀಪಕ್’ಗೆ ಹೆಣವಾಗಿದ್ದ ಮಹಿಳೆಯ ಕೈ ಕಂಡಿದೆ.

ಕೂಡಲೇ ಅವರೆಲ್ಲ ಹೆಣವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅಶುತೋಶ್ ಎಂಬವರು ಕಾರನ್ನು ಅವರಿಗಾಗಿ ಬಾಡಿಗೆಗೆ ಪಡೆದಿದ್ದರು. ಆರೋಪಿಗಳು ಅನಂತರ ಆ ಮಾರುತಿ ಬಾಲೆನೊ ಕಾರನ್ನು ಅಶುತೋಶ್’ ಇರುವಲ್ಲಿಗೆ ತಂದಿದ್ದಾರೆ.

  ಕಾರಿನ ಮಾಲಿಕ ಲೋಕೇಶ್ ಎಂಬುದನ್ನು ಪತ್ತೆಹಚ್ಚಿದ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ಅವರು ಕಾರನ್ನು ಅಶುತೋಶ್’ಗೆ ಬಾಡಿಗೆಗೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಅಶುತೋಶ್ ಅದನ್ನು ಅಮಿತ್ ಮತ್ತು ದೀಪಕ್’ಗಾಗಿ ಬಾಡಿಗೆಗೆ ಪಡೆದುದಾಗಿ ಹೇಳಿದ್ದಾಗಿಯೂ ತಿಳಿಸಿದ್ದಾರೆ.

ಕಾರು ಡಿಕ್ಕಿ ಹೊಡೆದಾಗ ಅಂಜಲಿ ಜೊತೆಗೆ ಒಬ್ಬ ಸ್ನೇಹಿತೆ ಇದ್ದಳು, ಅಪಘಾತ ಆಗುತ್ತಲೇ ಓಡಿಹೋಗಿದ್ದಳು ಎಂದೂ ಹೇಳಲಾಗಿದೆ.  

ನಾವು ಆ ಸ್ನೇಹಿತೆಯನ್ನು ಪತ್ತೆ ಹಚ್ಚಿ ಹೇಳಿಕೆ ಪಡೆದಿರುವುದಾಗಿ ಪೋಲೀಸರು ಹೇಳಿದ್ದಾರೆ.

ಕಾರಿನಲ್ಲಿದ್ದು ಬಂಧನಕ್ಕೊಳಗಾಗಿರುವ ಆರೋಪಿಗಳ ಮೇಲೆ ಕ್ರಿಮಿನಲ್ ಸಂಚು ಮತ್ತು ಅಸಡ್ಡೆಯಿಂದ ಸಾವಿಗೆ ಕಾರಣ ಹಾಗೂ ನರಹತ್ಯೆಗೆ ಸಮಾನವಾದ ಕೃತ್ಯ ಎಂದು ಮೊಕದ್ದಮೆ ಹೂಡಲಾಗಿದೆ.

ಜನರು ಬೀದಿಗಿಳಿದು ಪ್ರತಿಭಟಿಸಿದ ಬಳಿಕ ಗೃಹ ಮಂತ್ರಿ ಅಮಿತ್ ಶಾ ಅವರು ತೀವ್ರ ತನಿಖೆಗೊಳಪಡಿಸುವಂತೆ ಪೊಲೀಸ್ ಕಮಿಷನರ್ ಸಂಜಯ್ ಅರೋರಾರಿಗೆ ಸೂಚನೆ ನೀಡಿದ್ದಾರೆ.

ತಂದೆಯಿಲ್ಲದ ಅಂಜಲಿ ಸಿಂಗ್ ವಾಯವ್ಯ ದಿಲ್ಲಿಯ ಅಮನ್ ವಿಹಾರದಲ್ಲಿ ಇಬ್ಬರು ತಮ್ಮಂದಿರು ಮತ್ತು ತಾಯಿಯೊಂದಿಗೆ ವಾಸವಿದ್ದರು.

“ನನ್ನ ಮಗಳನ್ನು ಆ ಗುಂಪು ಲೈಂಗಿಕ ಹಿಂಸೆಗೊಳಪಡಿಸಿ ಕೊಲೆ ಮಾಡಿದೆ. ಬಟ್ಟೆ ಇಲ್ಲದಂತೆ ಮಾಡಿದ್ದಾರೆ. ನನಗೆ ಸಂಪೂರ್ಣ ನ್ಯಾಯ ಬೇಕು” ಎಂದು ತಾಯಿ ರೇಖಾ ಒತ್ತಾಯ ಮಾಡಿದ್ದಾರೆ.    

Join Whatsapp