ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗ್ಗೆ ಘೋರ ನಿರ್ಲಕ್ಷ್ಯ ಸರ್ಕಾರದ ತಾರತಮ್ಯ ನೀತಿಗೆ ಮತ್ತೊಂದು ನಿದರ್ಶನ: PFI ಆರೋಪ

Prasthutha|

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗ್ಗೆ ಘೋರ ನಿರ್ಲಕ್ಷ್ಯವು ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತರ ವಿರುದ್ಧ ಹೊಂದಿರುವ ತಾರತಮ್ಯ ನೀತಿಗೆ ಮತ್ತೊಂದು ನಿದರ್ಶನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸರ್ ಹಸನ್ ಆರೋಪಿಸಿದ್ದಾರೆ.

- Advertisement -

ಅಲ್ಪಸಂಖ್ಯಾತರ ಅಭಿವೃದ್ಧಿಯ ಉದ್ದೇಶದೊಂದಿಗೆ 35 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ನಿಗಮವು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಾತ್ರವಲ್ಲ ಇದೊಂದು ಸರ್ಕಾರಿ ಸ್ವಾಮ್ಯದ ಉದ್ದಿಮೆಯೂ ಆಗಿದೆ. ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲು ಈ ನಿಗಮವು ಒಂದು ಹಂತದ ವರೆಗೂ ಯಶಸ್ವಿಯೂ ಆಗಿತ್ತು. ಆದರೆ ಇದೀಗ, ಈ ನಿಗಮವು ಎನ್.ಬಿ.ಎಫ್.ಸಿ. ಗೆ ಸಂಬಂಧಿಸಿದ ಪ್ರಧಾನ ವ್ಯವಹಾರ ಮಾನದಂಡಗಳನ್ನು ಪಾಲಿಸುತ್ತಿಲ್ಲ ಮತ್ತು ಆಸ್ತಿ ಆದಾಯ ಅನುಪಾತಗಳು ಕನಿಷ್ಠ ನಿಗದಿತ ಅವಶ್ಯಕತೆಗಿಂತ ಕಡಿಮೆಯಾಗಿದ್ದರಿಂದ ಎನ್.ಬಿ.ಎಫ್.ಸಿ ಸ್ಥಾನಮಾನ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಪತ್ರ ಬರೆದಿದ್ದರೂ, ಎನ್.ಬಿ.ಎಫ್.ಐ ಸ್ಥಾನಮಾನ ಮತ್ತು ನೋಂದಣಿಯನ್ನು ಮರಳಿ ಪಡೆಯಲು ಸರ್ಕಾರದ ಇಲಾಖೆ ನಿರಾಸಕ್ತಿ ತೋರಿರುವುದು ಕಂಡು ಬಂದಿದೆ. ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಕ್ರಮೇಣ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಅದರಲ್ಲೂ ವಿಶೇಷವಾಗಿ ಕೈಸ್ತ ಮತ್ತು ಮುಸ್ಲಿಮರ ವಿರುದ್ಧದ ಪಕ್ಷಪಾತದ ಕ್ರಮವಾಗಿದೆ. ಈ ಹಿಂದೆ ಶೈಕ್ಷಣಿಕ ನೆರವಿಗಾಗಿ ರೂಪಿಸಲಾಗಿದ್ದ ಅರಿವು ಯೋಜನೆಯ ಅನುದಾನವನ್ನು ಸರ್ಕಾರವು ನಿಧಾನವಾಗಿ ಕಡಿತಗೊಳಿಸುತ್ತಾ ಬಂದಿತ್ತು. ಪಿ.ಎಚ್.ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಫ್ ಮೊತ್ತವನ್ನೂ ಕಡಿತಗೊಳಿಸಲಾಗಿತ್ತು. ಅದಕ್ಕೂ ಮೊದಲು ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಅನುದಾನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿತ್ತು.

- Advertisement -

ಅಲ್ಪಸಂಖ್ಯಾತರ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಗಂಭೀರ ಹಿಂದುಳಿಯುವಿಕೆಯನ್ನು ಗುರುತಿಸಿರುವ ಆಯೋಗಗಳು ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ ಶಿಫಾರಸು ಮಾಡಿವೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಉಪಕ್ರಮಗಳನ್ನು ತಡೆದು ಅನ್ಯಾಯವೆಸಗುತ್ತಿದೆ ಮತ್ತು ಅಲ್ಪಸಂಖ್ಯಾತರ ಆರ್ಥಿಕ, ಶೈಕ್ಷಣಿಕ ಸಬಲೀಕರಣಕ್ಕೆ ತಡೆಯೊಡ್ಡುತ್ತಿದೆ.ದೇಶದ ಅಲ್ಪಸಂಖ್ಯಾತರ ಕಲ್ಯಾಣವು ಸರ್ಕಾರದ ಹೊಣೆಗಾರಿಕೆಯಾಗಿದೆ. ಆದ್ದರಿಂದ ಸರ್ಕಾರವು ಅಲ್ಪಸಂಖ್ಯಾತರೊಂದಿಗೆ ನ್ಯಾಯೋಚಿತವಾಗಿ ವರ್ತಿಸಬೇಕಾಗಿರುವುದು ಅತ್ಯಗತ್ಯವಾಗಿದೆ.

ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ತೊರೆದು ನಿಗಮವನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಖಾತರಿಪಡಿಸಬೇಕೆಂದು ಯಾಸರ್ ಹಸನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp