ಬೆಂಗಳೂರು: ಸುಂಕದಕಟ್ಟೆಯ ಬಳಿ ಯುವತಿಯ ಮೇಲೆ ನಡೆಸಿದ ಆ್ಯಸಿಡ್ ದಾಳಿ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು
ಆ್ಯಸಿಡ್ ದಾಳಿ ನಡೆದಿದ್ದು, ಯುವಕನೊಬ್ಬ ಗಾಯಗೊಂಡ ಘಟನೆ ಕಬ್ಬನ್ ಪೇಟೆಯಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ನಡೆದ ಗಲಾಟೆಯ ವೇಳೆ ಆ್ಯಸಿಡ್ ದಾಳಿ ನಡೆದಿದೆ. ಗಾಯಗೊಂಡ ಪಶ್ಚಿಮ ಬಂಗಾಳ ಮೂಲದ ಜನತಾ ಆದಕ(32) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆ್ಯಸಿಡ್ ದಾಳಿ ನಡೆಸಿದ ಪಶ್ಚಿಮ ಬಂಗಾಳ ಮೂಲದ ಮಂತು ಸಾಂತ್ರ(31)ನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಹಲಸೂರು ಗೇಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ (ಪ್ರಭಾರ) ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಕಬ್ಬನ್ ಪೇಟೆ 4ನೇ ಕ್ರಾಸ್ ನಲ್ಲಿ ಬೆಳ್ಳಿ ಹಾಗೂ ಆಭರಣಗಳನ್ನು ಪಾಲಿಶ್ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಂತು ಸಾಂತ್ರ,ಜನತಾ ಆದಪ ಸೇರಿ ನಾಲ್ಕೈದು ಮಂದಿ ಬಾಡಿಗೆಗೆ ಕೊಠಡಿ ಪಡೆದು ವಾಸವಾಗಿದ್ದರು.
ಸ್ನೇಹಿತರಾಗಿದ್ದ ಇವೆರಲ್ಲೆರೂ ಕೆಲಸ ಮುಗಿಸಿಕೊಂಡು ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದು, ಮೇ.29ರ ಮಧ್ಯರಾತ್ರಿ 1.30ರ ವೇಳೆಗೆ ಮದ್ಯದ ಅಮಲಿನಲ್ಲಿದ್ದ ಮೂವರ ನಡುವೆ ಕ್ಷುಲಕ ಕಾರಣದಿಂದ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ.
ಜಗಳದಿಂದ ಆಕ್ರೋಶಗೊಂಡ ಮಂತು ಸಾಂತ್ರ ಮೊಬೈಲ್ ನಲ್ಲಿ ಜಗಳದ ವಿಡಿಯೋ ಮಾಡುತ್ತಾ ಕುಳಿತುಕೊಂಡಿದ್ದ ಜನತಾ ಆದಕ ಮೇಲೆ ದೂರದಿಂದ ಆ್ಯಸಿಡ್ ಎರಚಿದ್ದಾನೆ. ಕೈ ಅಡ್ಡಿಯಿಟ್ಟುಕೊಂಡಿದ್ದರಿಂದ ಜನತಾ ಕೆನ್ನೆ ಕುತ್ತಿಗೆ ಇನ್ನಿತರ ಭಾಗಗಳಿಗೆ ತಗುಲಿ ಚರ್ಮ ಸುಲಿದು ಗಾಯಗೊಂಡಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಪರಾರಿಯಾಗಿದ್ದ ಆರೋಪಿಯನ್ನು ನಿನ್ನೆ ಸಂಜೆ ಬಂಧಿಸಿದ್ದಾರೆ.
ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟೇಡ್ ಸೆಲ್ಫುರಿಕ್ ಆಸಿಡ್ ಗೆ ಹೆಚ್ಚಿನ ನೀರು ಬೆರಸಿದ್ದರಿಂದ ಅದು ತಗುಲಿದರೂ ಜನತಾ ಆದಕಗೆ ಮಾರಣಾಂತಿಕ ಗಾಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.