ಬೆಂಗಳೂರು: ಬಿಜೆಪಿಗೆ ಕರ್ನಾಟಕದ ಜನರ ಮೇಲೆ ಕಾಳಜಿ ಇದ್ದರೆ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದನ್ನ ವಾಪಸ್ ಪಡೆಯಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.
ಈ ಕುರಿತಂತೆ ಬೆಂಗಳೂರಿನಲ್ಲಿ ಗುರುವಾರ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗುಂಡೂರಾವ್, ಕೇಂದ್ರ ಸರ್ಕಾರದ ಆಹಾರ ನಿಗಮ ಅಕ್ಕಿ ಮಾರಾಟ ಸ್ಥಗಿತಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಸಿ.ಟಿ ರವಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋದನ್ನ ಬಿಟ್ಟು ಅವರ ಕೇಂದ್ರ ನಾಯಕರ ಜೊತೆ ಮಾತಾಡುವ ಧೈರ್ಯ ತೋರಿಸಲಿ. 10 ಕೆಜಿ ಅಕ್ಕಿ ಬಡವರಿಗೆ ಕೊಡಲು ಕಾಂಗ್ರೆಸ್ ಬದ್ಧವಾಗಿದೆ. ಆದರೆ ನಮಗೆ ಅಕ್ಕಿ ಸಿಕ್ತಿಲ್ಲ ಅಂತ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪ್ರಶ್ನೆಯಲ್ಲ. ಬಡವರ ಹಸಿವನ್ನ ನೀಗಿಸುವ ಪ್ರಶ್ನೆ. ಬಿಜೆಪಿಗೆ ಮತ ಹಾಕಿದ 35% ರಷ್ಟು ಜನರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೂ ನಾವು ಅಕ್ಕಿ ಕೊಡ್ತೇವೆ. ಇದನ್ನ ಅರಿತುಕೊಂಡು ಸಿ.ಟಿ ರವಿ ಮಾತಾಡಬೇಕು ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ದೊರೆಯುತ್ತಿರುವುದು ಮೋದಿ ಅವರಿಂದಲ್ಲ. ಯುಪಿಎ – 2 ಸರ್ಕಾರವಿದ್ದಾಗ ಆಹಾರ ಭದ್ರತೆ ಬಿಲ್ ತಂದಿದ್ದರಿಂದ ಇಂದು ಬಡವರಿಗೆ ಅಕ್ಕಿ ದೊರೆಯುತ್ತಿದೆ. ಸಿ.ಟಿ ರವಿ ಅವರಿಗೆ ರಾಜ್ಯದ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರ ನಾಯಕರ ಜೊತೆ ಮಾತಾಡಲಿ. ಕರ್ನಾಟಕದ 25 ಸಂಸದರು ಏನು ಮಾಡ್ತಿದ್ದಾರೆ. ಮೋದಿ ಅವರು ಒಪ್ಪುತ್ತಾರೋ ಇಲ್ವೋ. ಆದರೆ ರಾಜ್ಯದ ಪರ ಒಂದು ಪ್ರಯತ್ನವನ್ನಾದ್ರೂ ಬಿಜೆಪಿ ನಾಯಕರು ಮಾಡಬೇಕಲ್ವಾ ಎಂದು ಕುಟುಕಿದರು.
ಅಗತ್ಯ ಪ್ರಮಾಣದ ಅಕ್ಕಿ ಖರೀದಿಗೆ ಕಾಂಗ್ರೆಸ್ ಸರ್ಕಾರ ತನ್ನ ಶಕ್ತಿ ಮೀರಿ ಪ್ರಯತ್ನಿಸಲಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತೃವಾಗಿ ಚರ್ಚೆ ನಡೆದಿದೆ. ಬಡವರ ಪರವಾಗಿ ನ್ಯಾಯ ದೊರಕಿಸಲು ನಮ್ಮ ಪ್ರಯತ್ನ ಮುಂದುವರಿಸಲು ನಿರ್ಧರಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಚರ್ಚೆ ನಡೆದಿದೆ. ಛತ್ತೀಸಗಢ, ತೆಲಂಗಾಣ, ಆಂಧ್ರಪ್ರದೇಶದ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಗುಂಡೂರಾವ್ ತಿಳಿಸಿದರು.