ಬಜೆಟ್’ನಲ್ಲಿ ಆಂಧ್ರ, ಬಿಹಾರ, ಬಂಡವಾಳಶಾಹಿಗಳಿಗೆ ಉಡುಗೊರೆ; ಇಡೀ ದೇಶಕ್ಕೆ ಖಾಲಿ ಚೊಂಬು: ಅಬ್ದುಲ್ ಮಜೀದ್

Prasthutha|

- Advertisement -

ಬೆಂಗಳೂರು: ಮೋದಿ ನೇತೃತ್ವದ ಎನ್‌.ಡಿ.ಎ ಸರ್ಕಾರ ಮಂಡಿಸಿರುವ 2024 ರ ಬಜೆಟ್ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಮತ್ತು ಬಂಡವಾಳಶಾಹಿಗಳ ಬ್ಲಾಕ್ ಮೇಲ್ ಗೆ ಮಣಿದು ಮಂಡಿಸಿರುವ ಬಜೆಟ್ ನಂತಿದೆ. ಇದರಲ್ಲಿ ಜನಸಾಮಾನ್ಯರಿಗೆ ಎಳ್ಳಷ್ಟು ಆದ್ಯತೆ ನೀಡಲಾಗಿಲ್ಲ. ಕೇವಲ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಾಡಿರುವ ಸರ್ಕಸ್ ನಂತೆ ಈ ಬಜೆಟ್ ಕಾಣುತ್ತಿದೆ. ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಹೊರತುಪಡಿಸಿದರೆ ಉಳಿದ ರಾಜ್ಯಗಳಿಗೆ ಖಾಲಿ ಚೊಂಬು ಕೊಡಲಾಗಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿದರು.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಟೀಕಿಸಿರುವ ಅವರು,
ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ಮಟ್ಟದ ಅಯೋಗ್ಯತನದಿಂದ ಕೂಡಿದ ಬಜೆಟ್ ಹಿಂದೆಂದೂ ಕಂಡಿರಲಿಲ್ಲ, ಮುಂದೆ ಕಾಣೋದು ಇಲ್ಲವೆನಿಸುತ್ತದೆ ಎಂದರು.

- Advertisement -

ದೇಶದಲ್ಲಿ ನಿರುದ್ಯೋಗ ಉತ್ತುಂಗದಲ್ಲಿದೆ. ಮಧ್ಯಮ ವರ್ಗ ಬೆಲೆ ಏರಿಕೆಯಿಂದ ಕಂಗಲಾಗಿದ್ದು ಬಜೆಟ್ ಕಡೆ ಆಸೆ ಗಣ್ಣಿನಿಂದ ನೋಡುತ್ತಿತ್ತು. ಇನ್ನೊಂದಡೆ ಸಣ್ಣ ಉದ್ಯಮಗಳು, ಅತಿ ಸಣ್ಣ ಕೈಗಾರಿಕೆಗಳು ಮೋದಿ ಸರ್ಕಾರ ಈ ಹಿಂದೆ ಜಾರಿ ಮಾಡಿದ್ದ ನೋಟ್ ಬ್ಯಾನ್ ಮತ್ತು ಜಿಎಸ್‌ಟಿಯಿಂದ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಅವರು ಸಹ ಈ ಬಜೆಟ್ ನಲ್ಲಿ ಏನಾದರೂ ಆಶಾದಾಯಕವಾದ ಅಂಶಗಳು ಬರಬಹುದು ಎಂದು ಎದುರು ನೋಡುತ್ತಿದ್ದರು ಆದರೆ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಬೇಕಿರುವುದನ್ನು ಬಿಟ್ಟು ಬೇರೆ ಏನನ್ನು ಸಹ ನಿರ್ಮಲ ಸೀತಾರಾಮನ್ ಅವರ ಮಂಡಿಸಿದ ಈ ಬಜೆಟ್ ನಲ್ಲಿ ಭೂತ ಕನ್ನಡಿ ಹಾಕಿ ಹುಡುಕಿದರೂ ದೊರೆಯುವುದಿಲ್ಲ ಸಾರಸಗಟಾಗಿ ಇಡೀ ದೇಶದ ಜನರನ್ನು ಮೂರ್ಖರನ್ನಾಗಿಸುವ ಅಸಹಾಯಕತೆಯಲ್ಲಿ ಮುಳುಗಿಸುವ ಬಜೆಟ್ ಇದಾಗಿದೆ.

ನಿರುದ್ಯೋಗ ನಿವಾರಿಸಲು ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಜನರಿಗೆ ತರಬೇತಿಗೆ ವ್ಯವಸ್ಥೆ ಮಾಡುತ್ತಾರಂತೆ. ಅಂದರೆ ಪ್ರತಿಯೊಂದು ಕಂಪನಿಯಿಂದ 20,000 ಜನ ಯುವಕರು ತರಬೇತಿ ಪಡೆಯಲಿದ್ದಾರೆ. ಇದು ವಾಸ್ತವಕ್ಕೆ ಎಲ್ಲಿಯೂ ಸಹ ನಿಲುಕದ್ದು. ಏಕೆಂದರೆ ಈ 500 ಕಂಪನಿಗಳಲ್ಲಿ ಅವರ ಒಟ್ಟು ಉದ್ಯೋಗಿಗಳ ಸಂಖ್ಯೆಯೇ 20,000 ಇರುವ ಪ್ರಮೇಯಗಳು ಬಹಳ ಕಡಿಮೆ. ಹಾಗಿರುವಾಗ ಆ ಕಂಪನಿಗಳಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆಗಿಂತ ತರಬೇತಿ ಪಡೆಯುವ ಯುವಕರ ಸಂಖ್ಯೆ ಹೆಚ್ಚಾಗಲು ಹೇಗೆ ಸಾಧ್ಯ? ಇದೇ ರೀತಿ ವಸತಿ ರಹಿತರಿಗೆ ಒಂದು ಕೋಟಿ ಮನೆಗಳನ್ನು ಕಟ್ಟಿಕೊಡುವ ಭರವಸೆಯು ಸಹ. ದಶಕಗಳಿಂದ ಇಂತಹ ಭರವಸೆಗಳನ್ನು ಕೊಡುತ್ತಲೇ ಬರಲಾಗುತ್ತಿದೆ. ಮೋದಿಯವರಂತೂ 2022 ರ ಒಳಗೆ ಪ್ರತಿಯೊಬ್ಬರಿಗೂ ಮನೆ, ಮನೆಗೊಂದು ನಲ್ಲಿ, ನಲ್ಲಿಯಲ್ಲಿ ನೀರು ಕೊಡುವುದಾಗಿ ಉದ್ದುದ್ದ ಭಾಷಣಗಳನ್ನು ಮಾಡಿದ್ದರು. ಆದರೆ ಈಗ 2024ರ ಬಜೆಟ್ ನಲ್ಲಿ ಮತ್ತೆ ಮನೆ ನೀಡುವ ಭರವಸೆ ನೀಡುತ್ತಿದ್ದಾರೆ. ಈ ಬಜೆಟ್ ಸಂಪೂರ್ಣವಾಗಿ ಡೋಂಗಿತನದಿಂದ ಕೂಡಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕುಸಿದು ಬಿದ್ದಿರುವ ದೇಶದ ಆರ್ಥಿಕತೆಯನ್ನು ಹೇಗೆ ಮೇಲೆತ್ತಬೇಕು ಎಂಬ ಸಣ್ಣ ಸುಳಿವು ಕೂಡ ಸಿಗುತ್ತಿಲ್ಲ ಎಂದು ಈ ಬಜೆಟ್ ಸಾರಿ ಹೇಳುತ್ತಿದೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



Join Whatsapp