ಕೇಸರಿ ಶಾಲು ಹಿಡಿದ ವಿದ್ಯಾರ್ಥಿ ಸೋದರರಿಗೆ ಒಂದು ಬಹಿರಂಗ ಪತ್ರ

Prasthutha|

✍️ ಹರ್ಷಕುಮಾರ್ ಕುಗ್ವೆ

- Advertisement -

ಕೇಸರಿ ಶಾಲು, ಕೇಸರಿ ಮುಂಡಾಸು ಹಾಕಿಕೊಂಡು ಮುಸ್ಲಿಂ ಹೆಣ್ಣುಮಕ್ಕಳ ‘ಹಿಜಾಬ್’ ವಿರುದ್ಧ ಬೀದಿಗೆ ಇಳಿದಿರುವ ನನ್ನ ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯಗಳ ತಮ್ಮಂದಿರೆ, ನಿಮ್ಮೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು ಎನಿಸಿ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ದಯವಿಟ್ಟು ಎರಡು ನಿಮಿಷ ಸಮಾಧಾನದಿಂದ ಓದಿ. ನಂತರ ಆಲೋಚಿಸಿ, ತೀರ್ಮಾನಕ್ಕೆ ಬನ್ನಿ. ನಿಮ್ಮ ನಿಮ್ಮೆಲ್ಲರ ಮೇಲಿನ ಪ್ರೀತಿ, ಕಾಳಜಿಯಿಂದ ನಿಮ್ಮ ಒಬ್ಬ ಅಣ್ಣನಾಗಿ ನಾನು ಬರೆಯುತ್ತಿರುವ ಪತ್ರ.

ನೀವು ಯಾರದೋ ಮಾತು ಕೇಳಿಯೋ ಅಥವಾ ಮೀಡಿಯಾಗಳಲ್ಲಿ ಬಂದ ಸುದ್ದಿಗಳನ್ನು ನೋಡಿಯೋ ‘ಹಿಜಾಬ್ ವಿರುದ್ಧ” ಬೀದಿಗೆ ಇಳಿದಿದ್ದೀರಿ. ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಧರಿಸಿಕೊಂಡು ತಮ್ಮ ವೇಲ್ಗಳನ್ನು ಹಿಜಾಬ್ ಆಗಿ ತಲೆಗೆ ಸುತ್ತಿಕೊಂಡು ತರಗತಿಗಳಲ್ಲಿ ಕುಳಿತುಕೊಳ್ಳುವುದು ಸರಿಯೋ ತಪ್ಪೋ ಅಥವಾ ಅದಕ್ಕೆ ಅವಕಾಶ ಇದೆಯೇ ಇಲ್ಲವೇ ಎಂದು ನಂತರ ನೋಡೋಣ. ಈಗ ನಿಮ್ಮ ಜೀವನದ ಬಗ್ಗೆ ಕೆಲವು ಮುಖ್ಯ ವಿಷಯ ಹೇಳಬೇಕಿದೆ.

- Advertisement -

ನಿಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನಿಮ್ಮ ಕುಟುಂಬದಲ್ಲಿ ಶಿಕ್ಷಣ ಪಡೆಯುತ್ತಿರುವ ಮೊದಲ ತಲೆಮಾರಿನವರು. ಬಹುಶಃ ನಿಮ್ಮ ಅಪ್ಪನಾಗಲೀ ಅವ್ವನಾಗಲೀ ಕಾಲೇಜು ಮೆಟ್ಟಿಲು ಹತ್ತಿರಲಿಕ್ಕಿಲ್ಲ. ಅವರು ಹೊಲಗಳಲ್ಲೋ, ಫ್ಯಾಕ್ಟರಿಗಳಲ್ಲೋ ದುಡಿದು ದಣಿದು ನಿಮ್ಮ ಬಗ್ಗೆ ಅಪಾರ ಕನಸು ಕಟ್ಟಿಕೊಂಡು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ನಿಮ್ಮನ್ನು ಶಾಲೇ ಕಾಲೇಜು ಓದಲು ಕಳಿಸಿದ್ದಾರೆ ಎಂದು ನಾನು ಬಲ್ಲೆ. ನೀವು ಚನ್ನಾಗಿ ಓದಿ ಒಳ್ಳೆಯ ಅಂಕ ಗಳಿಸಿ, ಮುಂದೆ ಉದ್ಯೋಗಗಳನ್ನು ಪಡೆಯಲು ಸಾಕಷ್ಟು ಕಷ್ಟ ಪಡಬೇಕಾಗಿದೆ. ಉದ್ಯೋಗಗಳೇ ಗಗನ ಕುಸುಮವಾಗಿರುವ ಈ ದಿನಗಳಲ್ಲಿ ಒಂದು ಉದ್ಯೋಗ ಪಡೆದು ಜೀವನ ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಸ್ವಲ್ಪ ಯೋಚಿಸಿ, ನಿಮ್ಮ ತಂದೆ ತಾಯಿಗಳಿಗೆ ಕಳೆದ 20-30 ವರ್ಷಗಳ ಹಿಂದೆ ಈ ಅವಕಾಶಗಳೂ ಇರಲಿಲ್ಲ. ಯಾಕೆಂದರೆ ಅವರ ತಂದೆ ತಾಯಿಗಳು ಮತ್ತು ಅಜ್ಜ ಅಜ್ಜಿಯಂದಿರು ಯಾರದೋ ದೊಡ್ಡ ಜಮೀನುದಾರರ ಮನೆಗಳಲ್ಲಿ ಗೇಣಿದಾರರಾಗಿಯೋ ಇಲ್ಲವೇ ಬಿಟ್ಟಿ ಚಾಕರಿ ಮಾಡಿಕೊಂಡೋ ಕಾಲ ಕಳೆಯುವ ಸ್ಥಿತಿ ಇತ್ತು. ಆದರೆ ನಮ್ಮ ದೇಶದ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಹೇಳಿದ ಕಾರಣದಿಂದ ಗೇಣಿದಾರರಾಗಿದ್ದ ನಮ್ಮ ಹೀರೀಕರು ಜಮೀನಿಗೆ ಒಡೆಯರಾದರು ಮತ್ತು ಸಂವಿಧಾನದ ಮೂಲಕ ಬಂದ OBC, SC/ST ಮೀಸಲಾತಿಗಳ ಕಾರಣದಿಂದ ಹಿಂದುಳಿದ ಜಾತಿಗಳ ಮತ್ತು ದಲಿತ ಸಮುದಾಯಗಳ ವಿದ್ಯಾವಂತರಿಗೆ ನೌಕರಿಗಳು ಸಿಕ್ಕಿದವು. ನನ್ನ ಮಾತು ನಿಜವೋ ಸುಳ್ಳೋ ಎಂದು ನಿಮ್ಮ ಕುಟುಂಬದ ಹಿರಿಯರನ್ನೇ ಕೇಳಿ ನೋಡಿ. ನಿಮಗೇ ತಿಳಿಯುತ್ತದೆ.

ಸೋದರರೆ ಈಗ ನಿಮ್ಮ ಎದುರಿಗೆ ಇರುವ ಜೀವನದ ಸವಾಲುಗಳು ಎಷ್ಟು ಕಷ್ಟದವು ಎಂದು ಯೋಚಿಸಿ. ಒಂದು ಕಡೆ ಸರ್ಕಾರಗಳು ಹೆಚ್ಚು ನೌಕರಿಗಳನ್ನು ಒದಗಿಸುತ್ತಿಲ್ಲ. 100 ಉದ್ಯೋಗ ನೇಮಕಾತಿಗೆ ಸರ್ಕಾರ ಕಾಲ್ಫಾರ್ ಮಾಡಿದರೆ 1 ಲಕ್ಷ ಜನರು ಅರ್ಜಿ ಸಲ್ಲಿಸುತ್ತಾರೆ. ವಿಪರೀತ ಸ್ಪರ್ಧೆ. ಮತ್ತೆ ಅದರಲ್ಲಿ ಒಳ್ಳೆಯ ಅಂಕವಿರುವುದರ ಜೊತೆಗೆ ಯಾರು ಲಕ್ಷ ಲಕ್ಷ ರೂಪಾಯಿ ಲಂಚ ಕೊಡುತ್ತಾರೋ ಅವರಿಗೆ ಜಾಬ್ಗಳು ಸಿಗುವ ಸ್ಥಿತಿ ಇದೆ. ಹೀಗಿರುವಾಗ ನಿಮ್ಮಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಮೇಲೆ ಎಷ್ಟು ಗಮನ ಹರಿಸಬೇಕು ಎಂದು ಯೋಚಿಸಿ. ನಿಮ್ಮ ತಂದೆ ತಾಯಿಗಳ ಕನಸು ನನಸು ಮಾಡವ ಹೊಣೆ ಹೊತ್ತಿರುವ ನೀವು ಹಗಲು ರಾತ್ರಿ ಓದಬೇಕಾಗಿತ್ತು. ಅದೂ ಈಗ ಕೊರೊನಾ ಕಾರಣದಿಂದ ಸರಿಯಾಗಿ ತರಗತಿಗಳೇ ನಡೆಯದೇ ಇರುವಾಗ ಹತ್ತಿರ ಬಂದಿರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ನೀವು ಎಷ್ಟೊಂದು ಕಷ್ಟಪಡಬೇಕಿದೆ.

ನಮ್ಮ ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಈ ಮಾತನ್ನು ಗಮನವಿಟ್ಟು ಓದಿ.

‘ಭಾರತದಲ್ಲಿ ಬಡವರಿಗೂ ಶ್ರೀಮಂತರಿಗೂ, ದಲಿತ ಹಿಂದುಳಿದವರಿಗೂ ಮೇಲ್ಜಾತಿಗಳಿಗೂ ನಡುವೆ ಸಮಾನತೆ ಸಾಧ್ಯವಾಗಬೇಕು ಎಂದರೆ ದಲಿತ-ಹಿಂದುಳಿದ ವರ್ಗಗಳು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ಮಾತ್ರ ಸಾಧ್ಯ. ಉನ್ನತ ವರ್ಗಗಳಿಗೂ ಕೆಳ ವರ್ಗಗಳಿಗೂ ಹುಟ್ಟಿನ ಆಧಾರದ ಮೇಲೆ ಉಂಟಾಗಿರುವ ಕೃತಕ ತಾರತಮ್ಯವು ಆದಷ್ಟು ಬೇಗ ಕೊನೆಗೊಳ್ಳಬೇಕು. ಆದರೆ ಕೆಳ ವರ್ಗಗಳು ಶಿಕ್ಷಣದಲ್ಲಿ ಉನ್ನತ ವರ್ಗಗಳಿಗೆ ಸರಿಸಮ ಮಟ್ಟಕ್ಕೆ ಏರುವವರೆಗೂ ಇದು ಸಾಧ್ಯವಾಗುವುದಿಲ್ಲ” (ಅಂಬೇಡ್ಕರ್ ಬರೆಹಗಳು ಮತ್ತು ಭಾಷಣಗಳು ಸಂಪುಟ 17, ಭಾಗ 1, ಪುಟ 389-90)

ಇಲ್ಲಿ ಬಾಬಾಸಾಹೇಬರು ದಲಿತ-ಹಿಂದುಳಿದ ವರ್ಗಗಳು ಉನ್ನತ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯ ಎಂದು ತಿಳಿಸಿದ್ದಾರೆ. ನಿಮ್ಮಲ್ಲಿ ಅನೇಕರು ಇನ್ನೂ ಪಿಯುಸಿ, ಪದವಿ ತರಗತಿಗಳಲ್ಲಿ ಓದುತ್ತಿದ್ದೀರಿ. ನಿಮ್ಮಲ್ಲಿ ಎಷ್ಟು ಮಂದಿ ಉನ್ನತ ಶಿಕ್ಷಣ ಅಂದರೆ ಎಂಎ, ಎಂಎಸ್ಸಿ, ಎಂಕಾಂ, ಮೆಡಿಕಲ್, ಇಂಜಿನಿಯರಿಂಗ್ ಇತ್ಯಾದಿ ಓದಲು ಶಕ್ತರಿದ್ದೀರಿ ಆಲೋಚಿಸಿ. ಇದಕ್ಕಾಗಿ ನೀವೇನು ಮಾಡುತ್ತಿದ್ದೀರಿ ಎಂದೂ ಯೋಚಿಸಿ.

ಈಗ ಹಿಜಾಬ್’ ವಿಷಯ ಬಂದಿದೆ.

ಇದಕ್ಕೆ ಮೊದಲು ಮತ್ತೂ ಒಂದು ವಿಷಯ ಹೇಳಿಬಿಡುತ್ತೇನೆ. ಈಗ ಕೇವಲ 200 ವರ್ಷಗಳ ಹಿಂದೆ ಈ ದೇಶದಲ್ಲಿ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳಾಗಲೀ, ದಲಿತ ಹೆಣ್ಣುಮಕ್ಕಳಾಗಲೀ, ಬ್ರಾಹ್ಮಣ ಹೆಣ್ಣುಮಕ್ಕಳಾಗಲೀ ಶಾಲೆಗೆ ಹೋಗುವಂತಿರಲಿಲ್ಲ. ಶಿಕ್ಷಣ ಎನ್ನುವುದು ಸಮಾಜದ ಕೆಲವೇ ಉನ್ನತ ಜಾತಿ ವರ್ಗಗಳ ಸೊತ್ತಾಗಿದ್ದ ಕಾಲ ಅದು. ಆ ಹೊತ್ತಿನಲ್ಲಿ ಈ ಮೂರೂ ಸಮುದಾಯಗಳ ಹೆಣ್ಣುಮಕ್ಕಳ ಶಿಕ್ಷಣದ ಪರವಾಗಿ ಮೊದಲು ದನಿ ಎತ್ತಿದ್ದ ಮೂವರು ಮಹಾನ್ ವ್ಯಕ್ತಿಗಳೆಂದರೆ ಸಾವಿತ್ರಿ ಬಾ ಫುಲೆ, ಫಾತಿಮಾ ಶೇಖ್ ಮತ್ತು ಜ್ಯೋತಿಬಾ ಫುಲೆ. ಇವರಲ್ಲಿ ಫಾತಿಮಾ ಶೇಖ್ ಎಂಬ ಧೀಮಂತ ಮಹಿಳೆಯ ಮನೆಯಲ್ಲೇ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ವಸತಿ ಪಡೆದಿರುತ್ತಾರೆ. ನಂತರ ಸಾವಿತ್ರಿ ಬಾ ಫುಲೆ ಈ ದೇಶದ ಮೊತ್ತ ಮೊದಲ ಶಿಕ್ಷಕಿಯಾಗುತ್ತಾರೆ. ಅವರು ತೆರೆದ ಐದು ಶಾಲೆಗಳಲ್ಲೂ ಫಾತಿಮಾ ಶೇಕ್ ಶಿಕ್ಷಕಿಯಾಗುವ ಮೂಲಕ ಭಾರತದ ಮೊಟ್ಟಮೊದಲ ಮುಸ್ಲಿಂ ಶಿಕ್ಷಕಿ ಎನಿಸಿಕೊಳ್ಳುತ್ತಾರೆ. ಆ ಶಾಲೆಗಳಲ್ಲಿ ಫಾತಿಮಾ ಶೇಖ್ ಅವರು ಸಾವಿರಾರು ಬಡ ದಲಿತ, ಹಿಂದುಳಿದ ಹಾಗೂ ಬ್ರಾಹ್ಮಣ ಹೆಣ್ಣುಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ನಿಮಗೆ ಗೊತ್ತಿರಲಿಕ್ಕಿಲ್ಲ. ಅಂದು ಸಾವಿತ್ರಿ ಬಾ ಫುಲೆ ದಲಿತರಿಗೆ ಮತ್ತು ಹಿಂದುಳಿದವರಿಗಾಗಿ ಈ ಶಾಲೆಗಳನ್ನು ತೆರೆದಾಗ ಅವರ ಮೈಮೇಲೆ ಸೆಗಣಿ ಎರಚುವ ಕೆಲಸವನ್ನು ಮೇಲ್ಜಾತಿಗಳ ಜನರು ಮಾಡುತ್ತಾರೆ. ಯಾಕೆಂದರೆ ಯಕಶ್ಚಿತ್ ಶೂದ್ರ ದಲಿತರಿಗೆ ಶಿಕ್ಷಣ ನೀಡುವುದೇ ಅಪರಾಧ ಎಂದು ಮೇಲ್ಜಾತಿಗಳ ಜನರು ಭಾವಿಸಿದ್ದ ಕಾಲದಲ್ಲಿ ಸಾವಿತ್ರಿ ಬಾ ಮತ್ತು ಫಾತಿಮಾ ಶೇಖ್ ಮಾಡುತ್ತಿರು ಕೆಲಸ ಧರ್ಮದ್ರೋಹದ ಕೆಲಸವಾಗಿ ಅವರಿಗೆ ಕಾಣುತ್ತದೆ.  ಇಲ್ಲಿ ಫಾತಿಮಾ ಶೇಖ್ ಅವರ ವಿಷಯ ಯಾಕೆ ಪ್ರಸ್ತಾಪಿಸಿದೆ ಎಂದರೆ, ನೀವೆಲ್ಲಾ ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ವಿರುದ್ಧ ಬೀದಿಗೆ ಇಳಿದಿರುವಾಗ ಈ ದೇಶದ ಹಿಂದುಳಿದ, ದಲಿತ ಮತ್ತು ಬ್ರಾಹ್ಮಣ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಜೀವ ತೆತ್ತಿದ್ದವಳೂ ಅದೇ ಹಿಜಾಬ್ ತೊಟ್ಟಿದ್ದ ಒಬ್ಬ ಮುಸ್ಲಿಂ ಹೆಣ್ಣುಮಗಳು ಎಂದು ನೆನಪಿಸಲು.

ಸ್ವಲ್ಪ ಯೋಚಿಸಿ ಅವರೆಲ್ಲರೂ ನಡೆಸಿದ ಹೋರಾಟಗಳಿಂದಲೇ ಅಲ್ಲವೆ ಇಂದು ನಾವೆಲ್ಲಾ ಶಿಕ್ಷಣ ಪಡೆಯಲು ಸಾಧ್ಯವಾಗಿರುವುದು? ಅವರು ನಡೆಸಿದ ಹೋರಾಟವನ್ನು ಡಾ.ಬಿ.ಆರ್, ಅಂಬೇಡ್ಕರ್, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು, ಪ್ರೊ.ಬಿ. ಕೃಷ್ಣಪ್ಪ ಮೊದಲಾದವರು ಮುಂದುವರೆಸಿದ್ದರ ಪ್ರತಿಫಲವೇ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ದಲಿತ-ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿರುವುದು. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ರಾಜ್ಯದಾದ್ಯಂತ ವಿದ್ಯಾರ್ಥಿ ನಿಲಯಗಳನ್ನು ತೆರೆಯದೇ ಇದ್ದರೆ, ನಂತರ ದೇವೇಗೌಡರು ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯದೇ ಇದ್ದರೆ ಇಂದು ಲಕ್ಷಾಂತರ ಹಿಂದುಳಿದ ಮತ್ತು ದಲಿತ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲುಗಳಲ್ಲಿ ಇದ್ದು ವಿದ್ಯಾಭ್ಯಾಸ ಪಡೆಯಲು ಸಾಧ್ಯವಿತ್ತೆ? ಯೋಚಿಸಿ. \

ಒಂದು ಮಾತು ನಿಮಗೆ ಕಹಿ ಎನಿಸಿದರೂ ಪರವಾಗಿಲ್ಲ. ಇಂದು ಭಾರತದಲ್ಲಿ ಕೋಟ್ಯಂತರ ಹಿಂದುಳಿದ ಜಾತಿಗಳ ಮತ್ತು ದಲಿತ ಜಾತಿಗಳ ಜನರು ಶಿಕ್ಷಣ ಪಡೆಯಲು ಸಾದ್ಯವಾಗಿದೆ ಎಂದರೆ ಅದಕ್ಕೆ ಕಾರಣ ಯಾವುದೇ ಧರ್ಮವಾಗಲೀ, ಧರ್ಮ ಗ್ರಂಥವಾಗಲೀ ಅಲ್ಲ. ಇದಕ್ಕೆ ಕಾರಣ ಮೇಲೆ ಹೇಳಿದ ಮಹನೀಯರು ತಮ್ಮ ಬದುಕನ್ನೇ ಮುಡುಪಾಗಿಟ್ಟು ನಡೆಸಿದ ಹೋರಾಟ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ.

ಈಗ ಏನು ನಡೆಯುತ್ತಿದೆ? ಯಾವ ವರ್ಗಗಳು ಶತ ಶತಮಾನಗಳಿಂದಲೂ ಒಬಿಸಿ ಹಿಂದುಳಿದ ಜಾತಿಗಳನ್ನು, ದಲಿತ ಜಾತಿಗಳನ್ನು ಅಕ್ಷರ ಕಲಿಕೆಯಿಂದ ದೂರ ಇಟ್ಟಿದ್ದರೋ ಅವರೇ ಈಗ ನಿಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಇಂದು ಸಾವಿರಾರು ಉದ್ಯೋಗಗಳು ಹಿಂದುಳಿದವರ ಮತ್ತು ದಲಿತರ ಪಾಲಾಗುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ಹೇಗಾದರೂ ಮಾಡಿ ಹಿಂದುಳಿದ ಮತ್ತು ದಲಿತ ವರ್ಗಗಳ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ. ಇದಕ್ಕೆ ಅವರಿಗೆ ಇರುವ ಒಂದು ಸಾಧನ- ಧರ್ಮ- ಧರ್ಮ ರಕ್ಷಣೆ!! ಯೋಚಿಸಿ ನೋಡಿ. ಯಾರೆಲ್ಲಾ ಧರ್ಮ ರಕ್ಷಣೆ ಬಗ್ಗೆ ದೊಡ್ಡ ದೊಡ್ಡ ಮಾತು ಆಡುತ್ತಿದ್ದಾರೋ ಅವರ ಮಕ್ಕಳು ಯಾರೂ ಬೀದಿಯಲ್ಲಿ ಕೇಸರಿ ಶಾಲು ಹೊದ್ದು ಜೈ ಶ್ರೀ ರಾಮ್ ಘೋಷಣೆ ಕೂಗುತ್ತಲೇ ಇಲ್ಲ. ಅವರ ಮಕ್ಕಳೇನಿದ್ದರೂ ಪ್ರತಿಷ್ಠಿತ ಕ್ರಿಶ‍್ಚಿಯನ್ ಕಾನ್ವೆಂಟುಗಳಲ್ಲಿ, ದೊಡ್ಡ ದೊಡ್ಡ ನಗರಗಳ ಪ್ರತಿಷ್ಠಿತ ಬೋರ್ಡಿಂಗ್ ಶಾಲೆಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಇಂಗ್ಲಿಷ್ ಭಾಷೆಯ ಮೂಲಕವೇ ಒಳ್ಳೆಯ ಶಿಕ್ಷಣ ಪಡೆಯುತ್ತಿದ್ದಾರೆ. ಹಾಗೆ ಶಿಕ್ಷಣ ಪಡೆದ ಎಷ್ಟೋ ಜನರು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಉದ್ಯೋಗ ಪಡೆದು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ ಮುಂತಾದ ದೇಶಗಳಲ್ಲಿ ಹಾಯಾಗಿದ್ದಾರೆ. ಇಲ್ಲವೇ ಬೆಂಗಳೂರಿನಂತ ಕಡೆ ಮುಸ್ಲಿಮರು ನಡೆಸುವ ವಿಪ್ರೋದಂತಹ ಐಟಿ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗ ಪಡೆದು ಬಿಂದಾಸ್ ಜೀವನ ನಡೆಸುತ್ತಾರೆ. ಹೀಗಿರುವಾಗ ನಿಮ್ಮಂತಹ ಬಡ ದಲಿತ-ಹಿಂದುಳಿದವರನ್ನು ಧರ್ಮ ರಕ್ಷಣೆಯ ಹೆಸರಲ್ಲಿ ಕೇಸರಿ ಶಾಲು ಕೊಟ್ಟು, ಕೈಗೆ ತ್ರಿಶೂಲ, ತಲವಾರ್ ಕೊಟ್ಟು “ಮುಸ್ಲಿಂ ಹಿಜಾಬ್” ಭೂತ ತೋರಿಸಿ ನಿಮ್ಮ ಜೀವನಗಳನ್ನು ಬರ್ಬಾದ್ ಮಾಡಲು ಸಂಚು ನಡೆಸಿದ್ದಾರೆ.

ಇದಕ್ಕೆ ಬಲಿಯಾಗುವ ಬಲಿಕುರಿಗಳಾಗುತ್ತೀರೋ ಅಥವಾ ಡಾ.ಬಿ.ಆರ್, ಅಂಬೇಡ್ಕರ್ ಹೇಳಿದ ಮಾರ್ಗದಲ್ಲಿ ನಡೆಯುತ್ತೀರೋ ನಿಮಗೇ ಬಿಟ್ಟಿದ್ದು.

ಇನ್ನು ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ಕುರಿತು. ನೋಡಿ ಇಷ್ಟು ವರ್ಷ ಯಾರಿಗೂ ಸಮಸ್ಯೆ ಆಗದಿದ್ದ ವಿಷಯ ಈಗ ದೊಡ್ಡ ಸಮಸ್ಯೆಯಾಗಿದೆ. ಶಾಲೇ ಕಾಲೇಜುಗಳಿಗೆ ಎಲ್ಲಾ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕುತ್ತಿರಲಿಲ್ಲ. ಕೆಲವರು ಹಾಕಿಕೊಂಡು ತರಗತಿಯಲ್ಲಿ ಕೂರುತ್ತಿದ್ದರು. ಉಡುಪಿ ಕಾಲೇಜಿನ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಯೂನಿಫಾರಂ ವೇಲ್ ನ್ನೇ ತಲೆಗೆ ಸುತ್ತಿಕೊಂಡು ಕೂರುತ್ತಿದ್ದರು. ಇದರಿಂದ ಯಾರಿಗೆ ಸಮಸ್ಯೆ ಇತ್ತು? ಅವರೇನೂ ಸಮವಸ್ತ್ರ ಬೇಡ ಎಂದು ಹೇಳಿದ್ದರೆ? ಇಲ್ಲವಲ್ಲ? ನಮ್ಮ ಹಿಂದೂ ಹೆಣ್ಣುಮಕ್ಕಳೂ ಸಮವಸ್ತ್ರದ ಜೊತೆಗೆ ಹಿಂದೂ ಧರ್ಮದ ಸಂಕೇತಗಳಾದ ಹಣೆಕುಂಕುಮ/ಬಿಂದಿ ಇಟ್ಟುಕೊಂಡು, ಹೂ ಮುಡಿದುಕೊಂಡು, ಹಾಗೆಯೇ ನಮ್ಮ ಸರ್ಕಾರಿ ಕಾಲೇಜುಗಳ ಹಿಂದೂ ಮಹಿಳಾ ಉಪನ್ಯಾಸಕರು ತಮ್ಮ ಧರ್ಮ ಸಂಪ್ರದಾಯದಂತೆ ಮಾಂಗಲ್ಯಸರ, ಕಾಲುಂಗುರ ಹಾಕಿಕೊಂಡೇ ಬರುತ್ತಿದ್ದಾರೆ. ಕ್ರೈಸ್ತರು ಕ್ರಾಸ್ ಸಂಕೇತ ಇಟ್ಟುಕೊಂಡು ಬರುತ್ತಾರೆ. ವಿದ್ಯಾಭ್ಯಾಸ ಮಾಡಲು ಕಾಲೇಜಿಗೆ ಬರುವ ನಮಗೆ ಇವು ಮುಖ್ಯವಲ್ಲ. ಹಾಗೆ ನೋಡಿದರೆ ಇವೆಲ್ಲಾ ಭಾರತದ ಬಹುಸಂಸ್ಕೃತಿ ಪರಂಪರೆಗೆ ಅನುಗುಣವಾಗಿಯೇ ನಮ್ಮ ಶಾಲೇಕಾಲೇಜುಗಳನ್ನು “ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ” ವಾಗಿ ಮಾಡಿದೆ. ಇದು ಸಂವಿಧಾನ ಹೇಳುವ ಸರ್ವಧರ್ಮ ಸಮನ್ವಯ ತತ್ವಕ್ಕೆ ಅನುಗುಣವಾಗಿದೆ. ಕಾಲೇಜಿನ ಸಮವಸ್ತ್ರದ ಜೊತೆಗೆ ಅವರವರು ತಮ್ಮ ತಮ್ಮ ಸಂಪ್ರದಾಯದಂತೆ ಬಂದರೆ ಅದರಿಂದ ಯಾರಿಗೂ ನಷ್ಟವಿಲ್ಲ. ಹೀಗಿದ್ದರೂ ಇದನ್ನು ವಿವಾದ ಮಾಡಲಾಗಿದೆ. ಈಗ ವಿಷಯ ಕೋರ್ಟಿನ ಮೆಟ್ಟಿಲನ್ನೂ ಏರಿದೆ.

ಪ್ರೀತಿಯ ದಲಿತ-ಹಿಂದುಳಿದ ಸಮುದಾಯಗಳ ಸೋದರರೆ ಮೇಲಿನ ಎಲ್ಲಾ ವಿಷಯಗಳನ್ನು ಓದಿಕೊಂಡು, ನಿಮ್ಮನ್ನೇ ನೀವು ಕೇಳಿಕೊಳ್ಳಿ. ನಿಮ್ಮ ಮತ್ತು ನಿಮ್ಮ ಕುಟುಂಬ, ಸಮುದಾಯಗಳ ಉತ್ತಮ ಭವಿಷ್ಯಕ್ಕೆ ಯಾವುದು ಮುಖ್ಯ? ನಿಮ್ಮ ಓದು, ವಿದ್ಯಾಭ್ಯಾಸ, ನಿಮ್ಮ ಪಠ್ಯಪುಸ್ತಕ, ಪೆನ್ನು, ಪರೀಕ್ಷೆ ಇವು ನಿಮಗೆ ಮುಖ್ಯವೋ ಅಥವಾ ನಿಮ್ಮ ಬದುಕನ್ನೇ ಬರ್ಬಾದು ಮಾಡಬಲ್ಲ ಕೆಲವರ ಹಿಡನ್ ಅಜೆಂಡಾವೋ? ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ.  

Join Whatsapp