ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸಲಿದ್ದು, ಅವರ ನೇತೃತ್ವದಲ್ಲೇ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಎಬ್ಬಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾದ ಮತ್ತೊಬ್ಬ ನಾಯಕ ಜಗದೀಶ ಶೆಟ್ಟರ್ ಅವರು, ಸುಮಾರು ಅರ್ಧತಾಸಿಗೂ ಹೆಚ್ಚಿನ ಹೊತ್ತು ಸಮಾಲೋಚನೆ ನಡೆಸಿದ್ದಾರೆ
ಪಕ್ಷದಲ್ಲಿ ಹೊರಗಿನಿಂದ ಬಂದವರಿಗೆ ಏಕಾಏಕಿ ಮುಖ್ಯಮಂತ್ರಿ ಹುದ್ದೆಯಂತಹ ಪರಮೋಚ್ಛ ಹುದ್ದೆ ನೀಡಿರುವುದನ್ನು ಪಕ್ಷದ ವಿವಿಧ ಹಂತಗಳ ನಾಯಕರು, ಕಾರ್ಯಕರ್ತರು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರ ಬಗ್ಗೆ ದೊಡ್ಡ ಅಸಮಾಧಾನ ಸೃಷ್ಟಿಯಾಗಿತ್ತು. ಅದು ಶಮನವಾಗುವ ಮುನ್ನವೇ, ಅಮಿತ್ ಶಾ ಅವರು ಮುಂದಿನ ಚುನಾವಣೆಗೂ ಬೊಮ್ಮಾಯಿಯವರದೇ ನಾಯಕತ್ವ ಎಂಬ ಹೇಳಿಕೆ ನೀಡಿರುವುದು ಕಾರ್ಯಕರ್ತರು, ನಾಯಕರ ಬಗ್ಗೆ ಸಿಟ್ಟಿಗೆ ಕಾರಣವಾಗಿದೆ. ಯಡಿಯೂರಪ್ಪ ಮತ್ತು ಶೆಟ್ಟರ್ ಮಧ್ಯೆ ನಡೆದ ಚರ್ಚೆಯಲ್ಲಿ ಈ ಅಂಶವೇ ಪ್ರಮುಖವಾಗಿತ್ತು ಎಂದು ಮೂಲಗಳು ಹೇಳಿವೆ.
ಚುನಾವಣೆಗೆ ಇನ್ನೂ ಬಹಳ ಸಮಯವಿದೆ. ಈ ಹೊತ್ತಿನಲ್ಲಿ ಇಂತಹ ಘೋಷಣೆ ಮಾಡುವ ಅವಶ್ಯಕತೆ ಪಕ್ಷದ ಕಾರ್ಯಕರ್ತರ ಭರವಸೆ ಕುಂದಿಸಿ, ವಿಶ್ವಾಸವನ್ನು ಧೃತಿಗೆಡಸಲಿದೆ ಎಂದು ಇಬ್ಬರು ನಾಯಕರು ಚರ್ಚೆ ನಡೆಸಿದರು. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿರುವುದು ತಪ್ಪಲ್ಲ ಎಂದು ಒಪ್ಪಿಕೊಳ್ಳಬಹುದು. ಮುಂದಿನ ಚುನಾವಣೆಗೂ ಅವರದ್ದೇ ನಾಯಕತ್ವ ಎನ್ನುವುದಾದರೆ ಪಕ್ಷದ ಸಿದ್ಧಾಂತ, ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಸಂಘಟನೆಯನ್ನು ಬಲಪಡಿಸಿದವರು ಸುಮ್ಮನೇ ಕೂರಬೇಕೆ? ಈ ಕ್ರಮ ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಪ್ರತಿಪಾದಿಸಿದರು ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಪೋಟಗೊಂಡು ಪಕ್ಷದಲ್ಲಿ ಬಿರುಕುಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.