ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ: ಜಮ್ಮು, ರಜೌರಿಯಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತ

Prasthutha|

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಜಮ್ಮು, ಕಾಶ್ಮೀರ ಮತ್ತು ರಜೌರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮಂಗಳವಾರ ಸ್ಥಗಿತಗೊಳಿಸಲಾಗಿದೆ.
ದೇಶವಿರೋಧಿ ಶಕ್ತಿಗಳು ಈ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಸಾರ್ವಜನಿಕ ಸುವ್ಯವಸ್ಥೆ ಹದಗೆಡುವ ಸಾಧ್ಯತೆ ನೆಪವೊಡ್ಡಿ ಜಮ್ಮು ಮತ್ತು ಕಾಶ್ಮೀರ ಜಿಲ್ಲಾಡಳಿತ ಇಂಟರ್ನೆಟ್ ಸ್ಥಗಿತಕ್ಕೆ ಆದೇಶ ನೀಡಿದೆ. ಮಂಗಳವಾರ ಸಂಜೆ 7ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

- Advertisement -

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಖಚಿತಪಡಿಸಿದ್ದಾರೆ.

ಅಕ್ಟೋಬರ್ 5ರಂದು ಶ್ರೀನಗರದ ರಾಜಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ಕುರಿತು ಪರಿಶೀಲಿಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಉನ್ನತ ಮಟ್ಟದ ಸಭೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ, ಸೇನೆಯ ಉನ್ನತ ಅಧಿಕಾರಿಗಳು, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಈ ಮಧ್ಯೆ ಬಂಧಿಖಾನೆಯ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಕೆ ಲೋಹಿಯಾ ಅವರು ನಿನ್ನೆ ರಾತ್ರಿ ಜಮ್ಮುವಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರನ್ನು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ 23 ವರ್ಷದ ಮನೆಕೆಲಸದಾಳು ಯಾಸಿರ್ ಅಹ್ಮದ್ ಎಂಬಾತನನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp