ಜ.15-16ರಂದು ಅಮಿತ್ ಶಾ ರಾಜ್ಯ ಭೇಟಿ | ತಾ.ಪಂ., ಜಿ.ಪಂ. ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿ

Prasthutha|

ಬೆಂಗಳೂರು : ಶೀಘ್ರದಲ್ಲೇ ನಡೆಯಲಿರುವ ರಾಜ್ಯದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜ.15-16ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಶಸ್ವಿ ಸಾಧಿಸಿದ ಬಿಜೆಪಿ, ಇದೀಗ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ಒಂದು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೇಲೆ ಕಣ್ಣಿಟ್ಟಿದೆ.

- Advertisement -

ಶಾ ಭೇಟಿಯ ವೇಳೆ ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕರೂ ಭಾಗವಹಿಸುವ ಸಾಧ್ಯತೆಯಿದೆ. ಬಿಜೆಪಿ ಶಾ ಭೇಟಿ ವೇಳೆ ಕಾರ್ಯಕ್ರಮ ಹೇಗೆ ರೂಪಿಸಬೇಕು ಎಂಬುದರ ಸಿದ್ಧತೆಯಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ಜ.11ರಿಂದ ಬಿಜೆಪಿ ಜಿಲ್ಲಾ ಮಟ್ಟದ ಜನಸೇವಕ್ ಅಭಿಯಾನ ಮೈಸೂರಿನಿಂದ ಆರಂಭಿಸಲಿದೆ. ನೂತನ ಪಂಚಾಯತ್ ಸದಸ್ಯರು ಆಯ್ಕೆಯಾದ ಪಂಚಾಯತಿಗಳನ್ನು ಗುರಿಯಾಗಿಸಿ, ಈ ಅಭಿಯಾನ ನಡೆಯಲಿದೆ. ಹೊಸ ಪಂಚಾಯತ್ ಸದಸ್ಯರಿಗೆ ತಮ್ಮ ಜವಾಬ್ದಾರಿಗಳನ್ನು ತಿಳಿಸಿಕೊಡುವ ಮತ್ತು ಸೋತವರಿಗೆ ಪಕ್ಷದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ.

- Advertisement -

ಕರ್ನಾಟಕದ 30 ಜಿಲ್ಲೆಗಳು ಮತ್ತು 226 ತಾಲೂಕುಗಳಿವೆ. ಇವುಗಳಿಗೆ ಮೇನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಇದು ಬಿಜೆಪಿ ಮತ್ತು ಸಿಎಂ ಯಡಿಯೂರಪ್ಪರ ಸರಕಾರಕ್ಕೆ ಒಂದು ದೊಡ್ಡ ಪರೀಕ್ಷೆಯಂತಾಗಿದ್ದು, ಇದರಲ್ಲಿ ಯಶಸ್ವಿಯಾಗಲು ಎಲ್ಲಾ ಸಿದ್ಧತೆಗಳನ್ನು ಪಕ್ಷ ಮಾಡಿಕೊಳ್ಳುತ್ತಿದೆ.

ತಾ.ಪಂ., ಜಿ.ಪಂ. ಚುನಾವಣೆ ಜೊತೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ನಡೆಯುವ ನಿರೀಕ್ಷೆಯಿದೆ.   

Join Whatsapp