ಗೋವಾ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಮಿತ್ ಪಾಲೇಕರ್ ಹೆಸರು ಘೋಷಣೆ
Prasthutha: January 19, 2022

ಪಣಜಿ: ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಅಮಿತ್ ಪಾಲೇಕರ್ ಅವರನ್ನು ಗೋವಾದ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಬುಧವಾರ ಘೋಷಣೆ ಮಾಡಿದರು. ಫೆಬ್ರವರಿಯಲ್ಲಿ ಗೋವಾದಲ್ಲಿ ಮತದಾನ ನಡೆದು, ಮಾರ್ಚ್ ನಲ್ಲಿ ಫಲಿತಾಂಶ ಹೊರಬೀಳಲಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಅಜಂಗಡದಿಂದ ವಿಧಾನ ಸಭೆಗೆ ಸ್ಪರ್ಧಿಸುವರು ಎಂದು ಪಕ್ಷದ ಮೂಲಗಳು ಬುಧವಾರ ಹೇಳಿವೆ. ಅಜಂಗಡದ ಸಂಸದರಾಗಿದ್ದ ಎಸ್ ಪಿಯ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ಅಖಿಲೇಶ್ ಅವರು ನೇರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಲಾಗಿತ್ತು.
ಈ ನಡುವೆ ಸಮಾಜವಾದಿ ಪಕ್ಷಕ್ಕೆ ಬಿದ್ದ ದೊಡ್ಡ ಏಟು ಎಂದರೆ ಸಮಾಜವಾದಿ ಪಕ್ಷ ಕಟ್ಟಿರುವ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು. ಅಖಿಲೇಶ್ ಯಾದವ್ ಅವರ ಮಲ ತಮ್ಮ ಪ್ರತೀಕ್ ಯಾದವ್ ರ ಪತ್ನಿ ಈ ಅಪರ್ಣಾ. ಬಿಜೆಪಿಯಿಂದ ಹೊರಬಂದ ಹಲವರು ಬಿಜೆಪಿ ಸೇರಿದ ಮರುದಿನವೇ ಅಪರ್ಣಾ ಬಿಜೆಪಿ ಸೇರಿರುವರೆಂಬುದು ವಿಶೇಷ.
ಪಂಜಾಬಿನಲ್ಲಿ ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಆದ ಭಗವಂತ್ ಮನ್ನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಆಮ್ ಆದ್ಮಿ ಪಕ್ಷದ ಮೂಲ ಆಶಯಗಳನ್ನು ಪಂಜಾಬಿನಲ್ಲಿ ನಮ್ಮ ತಂಡ ಮಾತ್ರ ಪರಿಣಾಮಕಾರಿಯಾಗಿ ಜಾರಿಗೆ ತರಬಲ್ಲುದು. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಬಾಯಲ್ಲಿ ಹೇಳುತ್ತಾರೆಯೇ ಹೊರತು ಏನೂ ಮಾಡುವುದಿಲ್ಲ. ಆಮ್ ಆದ್ಮಿ ಪಕ್ಷದವರ ಮೇಲೆ ಎಂದಾದರೂ ಇಡಿ- ಜಾರಿ ನಿರ್ದೇಶನಾಲಯದವರ ದಾಳಿ ನಡೆದದ್ದು ಕೇಳಿದ್ದೀರಾ? ಇಡಿಯವರು ಚನ್ನಿಯವರ ಸೋದರಳಿಯನ ಮನೆಗೆ ದಾಳಿ ಮಾಡಿದರು. ಅವರದು ಮರಳು ಮಾಫಿಯಾ ಎಂದು ಹೇಳಿದರು.
