ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನನೊಂದು ಯುವಕನೋರ್ವ ಕತ್ತುಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೈಸೂರಿನ ಮಾತೃ ಮಂಡಳಿ ಶಾಲಾ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂಬ ಕೂಗು ಬಲವಾಗಿ ಕೇಳಿ ಬಂದರೂ ಪಾಲಿಕೆ ಈ ಹಿಂದಿನಿಂದಲೂ ನಿರ್ಲಕ್ಷ್ಯ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಪಡುವಾರಹಳ್ಳಿಯ ನಿವಾಸಿಗಳು ಸೇರಿಕೊಂಡು ಮಾತೃ ಮಂಡಳಿ ವೃತ್ತದಲ್ಲಿ ರಾತ್ರೋರಾತ್ರಿ ಕಂಚಿನ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲು ಪಾಲಿಕೆಯ ಅನುಮತಿ ಪಡೆದುಕೊಂಡಿಲ್ಲ ಎಂಬ ನೆಪದಲ್ಲಿ ನಗರ ಪಾಲಿಕೆ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿತ್ತು. ಪಾಲಿಕೆ ಅಧಿಕಾರಿಗಳ ಈ ಕ್ರಮವನ್ನು ವಿರೋಧಿಸಿ ರಾಜೇಶ್ ಎಂಬಾತ ಹರಿತವಾದ ಬ್ಲೇಡ್ ನಿಂದ ತನ್ನ ಕತ್ತನ್ನು ಕೊಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದರಿಂದ ಅಕ್ರೋಶಗೊಂಡ ಯುವಕರ ಗುಂಪು ಮತ್ತು ಗ್ರಾಮಸ್ಥರು ಪಾಲಿಕೆಯ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.