ಚಂಡೀಘಡ: ಮುಂದಿನ ವರ್ಷ ಪಂಜಾಬ್ ನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಮುನ್ನ ನೂತನ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆಯೋಗ ದೃಢಪಡಿಸಿದ ನಂತರ ನೂತನ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ಮಾತ್ರವಲ್ಲ ಪ್ರಸಕ್ತ ಕಾಂಗ್ರೆಸ್ ನ ಹಲವು ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ನೂತನ ಪಕ್ಷ ಎಲ್ಲಾ 117 ಸೀಟ್ ಗಳಲ್ಲಿ ಸ್ಪರ್ಧೆ ನಡೆಸುವುದಾಗಿ ತಿಳಿಸಿದರು.
ಬಿಜೆಪಿಯೊಂದಿಗಿನ ಮೈತ್ರಿಯ ಕುರಿಯ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ತಮ್ಮ ಪಕ್ಷ ಸಾಂದರ್ಭಿಕವಾಗಿ ಯಾರನ್ನು ಬೆಂಬಲಿಸಬೇಕೆಂದು ತೀರ್ಮಾನಿಸುತ್ತದೆ. ರೈತರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ರೈತರ ಹಿಸಾಸಕ್ತಿಯನ್ನು ಪರಿಹರಿಸುವ ಆಧಾರದಲ್ಲಿ ಸೀಟುಗಳನ್ನು ಹಂಚಲಾಗುವುದೆಂದು ತಿಳಿಸಿದರು.
ಅಕಾಲಿದಳ, ಆಮ್ ಆದ್ಮಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸುವ ಸಲುವಾಗಿ ಪ್ರತ್ಯೇಕ ಐಕ್ಯರಂಗವನ್ನು ಸ್ಥಾಪಿಸುವ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ತಿಳಿಸಿದರು.
ಬುಧವಾರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.