ಬೆಂಗಳೂರು: ಇಲ್ಲಿನ ಎಲ್ಲಾ ಮುಸ್ಲಿಮರು, ಕ್ರಿಶ್ಚಿಯನ್ನರೂ ಇವತ್ತಲ್ಲ ನಾಳೆ ಆರ್ ಎಸ್ ಎಸ್ ಆಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಹೇಳಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಚರ್ಚೆ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಮಧ್ಯಪ್ರವೇಶಿಸಿ ಮಾತನಾಡಿದ ಈಶ್ವರಪ್ಪ, ಮುಂದೆ ಎಲ್ಲರೂ ಆರೆಸ್ಸಿನವರಾಗುತ್ತಾರೆ ಎಂದರು. ಇದರಿಂದ ಕೆರಳಿದ ಕೆಜೆ, ಜಾರ್ಜ್, ಪ್ರಿಯಾಂಕ್ ಖರ್ಗೆ, ಯುಟಿ ಖಾದರ್, ಮತ್ತಿತರರು ಈಶ್ವರಪ್ಪ ಅವರ ವಿರುದ್ಧ ಟೀಕಾಪ್ರಹಾರ ನಡೆಸಿ ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮೊದಲು ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಪರಸ್ಪರ ಗೌರವ ಕೊಡುವುದು ಪ್ರಮುಖವಾಗಿದೆ ಎಂದು ಹೇಳಿದರು. ನಂತರ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಉಲ್ಲೇಖಿಸಿ, ನೀ ಒಳ್ಳೆಯ ಮನುಷ್ಯ, ನಾನು ಕೂಡಾ ಒಳ್ಳೆಯ ಮನುಷ್ಯ. ಒಂದು ವೇಳೆ ನೀವು ಬಿಜೆಪಿ ಅಥವಾ ಆರ್ ಎಸ್ ಎಸ್ ನವರಾದರೆ ಅದು ಬೇರೆ ವಿಷಯ ಎಂದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾತುಕತೆಯಲ್ಲಿ ಏಕೆ ಆರ್ ಎಸ್ ಎಸ್ ಎಳೆದು ತರಲಾಗುತ್ತಿದೆ, ನಮ್ಮ ಆರ್ ಎಸ್ ಎಸ್ ನ್ನು ಏಕೆ ವಿರೋಧಿಸುತ್ತೀರಾ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಜಮೀರ್ ಅಹಮದ್ ಖಾನ್, ಸ್ಪೀಕರ್ ಆಸನದಲ್ಲಿ ಕುಳಿತು ಆರ್ ಎಸ್ ಎಸ್ ಪ್ರತಿನಿಧಿ ಎಂಬಂತೆ ಹೇಗೆ ನಮ್ಮ ಆರ್ ಎಸ್ ಎಸ್ ಎಂದು ಹೇಳುತ್ತೀರಾ ಎಂದು ಕಾಗೇರಿ ಅವರನ್ನು ಪ್ರಶ್ನಿಸಿದರು.
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಭಾಧ್ಯಕ್ಷರು, ಇದು ನಮ್ಮ ಆರ್ ಎಸ್ ಎಸ್ ನಿಜ, ಕೆಲ ದಿನಗಳಲ್ಲಿ ನೀವು ಕೂಡಾ ನಮ್ಮ ಆರ್ ಎಸ್ ಎಸ್ ಅಂತಾ ಕರೆದುಕೊಳ್ಳುತ್ತೀರಾ ಎಂದರು. ಯಾರಾದರೂ ಇಷ್ಟಪಡಲಿ ಅಥವಾ ಪಡದಿರಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಉನ್ನತ ಸ್ಥಾನದಲ್ಲಿರುವ ಎಲ್ಲಾ ರಾಜಕೀಯ ನಾಯಕರು ಆರ್ ಎಸ್ ಎಸ್ ಸೇರಿದವರಾಗಿದ್ದಾರೆ ಎಂದು ಆರ್ ಅಶೋಕ್ ಹೇಳಿದರು.
ಈ ಮಾತುಕತೆಗೆ ಜೊತೆಯಾದ ಕೆ.ಎಸ್. ಈಶ್ವರಪ್ಪ, ಸದ್ಯದಲ್ಲಿಯೇ ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಆರ್ ಎಸ್ ಎಸ್ ಭಾಗವಾಗಲಿದ್ದಾರೆ ಎಂದರು. ಇದರಿಂದ ಕೆರಳಿದ ಕೆಜೆ, ಜಾರ್ಜ್, ಪ್ರಿಯಾಂಕ್ ಖರ್ಗೆ, ಯುಟಿ ಖಾದರ್, ಮತ್ತಿತರರು ಈಶ್ವರಪ್ಪ ಅವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.