ಹೈದರಾಬಾದ್: ತೆಲಂಗಾಣದಲ್ಲಿರುವ ಎಲ್ಲ ಮಸೀದಿಗಳಲ್ಲಿಯೂ ಉತ್ಖನನ ನಡೆಸುವುದಾಗಿ ಸವಾಲು ಹಾಕಿರುವ, ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, ಈ ಮಸೀದಿಗಳ ಅಡಿ ಶಿವಲಿಂಗ ಪತ್ತೆಯಾದರೆ, ಮುಸ್ಲಿಮರು ಆ ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಒಂದು ವೇಳೆ ಮೃತದೇಹಗಳು ಕಂಡುಬಂದರೆ, ಮುಸ್ಲಿಮರು ಅವುಗಳನ್ನು ತೆಗೆದುಕೊಳ್ಳಬಹುದು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಜ್ಞಾನವಾಪಿ ಮಸೀದಿಯ ಕುರಿತು ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಅವರು “ರಾಜ್ಯದಲ್ಲಿನ ಎಲ್ಲ ಮಸೀದಿಗಳನ್ನೂ ನಾವು ಅಗೆಯುತ್ತೇವೆ ಎಂದು ನಾನು ಉವೈಸಿ ಅವರಿಗೆ ಸವಾಲು ಹಾಕುತ್ತೇನೆ. ಒಂದು ವೇಳೆ ಮೃತದೇಹಗಳು ಅಲ್ಲಿ ಸಿಕ್ಕರೆ, ನೀವು (ಮುಸ್ಲಿಂ) ಅದು ತಮ್ಮದೆಂದು ಪ್ರತಿಪಾದಿಸಿ. ಒಂದು ವೇಳೆ ಶಿವಲಿಂಗ ದೊರೆತರೆ, ಅದನ್ನು ನಮಗೆ ಒಪ್ಪಿಸಿ. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ?” ಎಂದು ಬಂಡಿ ಸಂಜಯ್ ಕುಮಾರ್ ಕೇಳಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಮತ್ತು ಉರ್ದು ಭಾಷೆಯನ್ನು ನಿಷೇಧಿಸಲಾಗುತ್ತದೆ. ಜತೆಗೆ ತೆಲಂಗಾಣದಲ್ಲಿನ ಬಿಜೆಪಿ ಸರ್ಕಾರ ಲವ್ ಜಿಹಾದ್ ಅನ್ನು ತಡೆಯಲಿದೆ ಎಂದು ಹೇಳಿದ್ದಾರೆ.
ನಾವು ಉರ್ದು ಭಾಷೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ. ದೇಶದಲ್ಲಿ ಎಲ್ಲಿಯೇ ಬಾಂಬ್ ಸ್ಫೋಟವಾದರೂ, ಅದಕ್ಕೆ ಕಾರಣ ಮದರಸಾಗಳು ಭಯೋತ್ಪಾದಕರ ತರಬೇತಿ ಕೇಂದ್ರವಾಗಿರುವುದು. ನಾವು ಅವುಗಳನ್ನು ಗುರುತಿಸಬೇಕು” ಎಂದು ಮದ್ರಸಾಗಳ ವಿರುದ್ಧ ಕಿಡಿಕಾರಿದ್ದಾರೆ.