ನವದೆಹಲಿ : ಇತ್ತೀಚೆಗೆ ಮಧ್ಯ ಪ್ರದೇಶದ ಕೆಲವು ಕಡೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹದ ಹೆಸರಿನಲ್ಲಿ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ರ್ಯಾಲಿ ನಡೆಸಿ, ಮುಸ್ಲಿಮರ ಮೇಲೆ ದಾಳಿ, ಹಿಂಸಾಚಾರ ನಡೆಸಿದ್ದನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಖಂಡಿಸಿದೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅಹಮದ್ ಬೇಗ್ ನಧ್ವೀ ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಈ ಮೊದಲು 1990ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡುವುದಕ್ಕಾಗಿ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ನಡೆಸಿದ ರಥ ಯಾತ್ರೆಗಳಲ್ಲಿ ದಾಳಿ, ಹಿಂಸಾಚಾರ, ಹತ್ಯಾಖಾಂಡಕ್ಕೊಳಗಾದ ಮುಸ್ಲಿಮ್ ಸಮುದಾಯದವರು ಇವತ್ತಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳಾದ ಸಂಘಪರಿವಾರದವರು ಉದ್ದೇಶ ಪೂರ್ವಕವಾಗಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಣೆ ಹೆಸರಿನಲ್ಲಿ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಬಲವಂತವಾಗಿ ರ್ಯಾಲಿ ನಡೆಸುವುದು, ಅದು ಮಸೀದಿ, ಮದರಸ, ದರ್ಗಾ ಸಮೀಪಿಸುವಾಗ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮರ ವಿರುದ್ಧವಾಗಿ ಅತ್ಯಂತ ಕೆಟ್ಟ ಘೋಷಣೆ ಕೂಗಿ ಗಲಭೆಯ ವಾತಾವರಣ ಸೃಷ್ಟಿ ಮಾಡುವುದು ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ರ್ಯಾಲಿಗೆ ಮುಸ್ಲಿಮರು ಕಲ್ಲು ಬಿಸಾಡಿದರು ಎಂದು ಸುಳ್ಳನ್ನು ಹರಡಿ ಆ ಪ್ರದೇಶದಲ್ಲಿ ಇರುವ ಮುಸ್ಲಿಮರ ಧಾರ್ಮಿಕ ಆರಾಧನೆ ಕೇಂದ್ರ, ಅಂಗಡಿ, ಮನೆಗಳ ಮೇಲೆ, ಜನರ ಮೇಲೆ ಪೋಲಿಸರ ಬೆಂಬಲದೊಂದಿಗೆ ದಾಳಿಗಳು ನಡೆಸುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಇದು ಬಿಜೆಪಿಗೆ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಲು ಅನಿವಾರ್ಯವೂ ಆಗಿದೆ. ಬಾಬರಿ ಮಸೀದಿ ರಾಮ ಮಂದಿರದ ವಿಷಯವನ್ನು ಎತ್ತಿ ಹಿಂದುತ್ವ ರಾಜಕೀಯದ ಮೂಲಕವೇ ಬಿಜೆಪಿ ಇಂದು ಕೇಂದ್ರದಲ್ಲಿ ಅಧಿಕಾರಕ್ಕೆ ತಲುಪಿದೆ.
ಇದೀಗ ಸೆಕ್ಯುಲರ್ ಪಕ್ಷಗಳು ರಾಮ ಮಂದಿರ ನಿರ್ಮಾಣಕ್ಕಾಗಿ ಸಂಘಪರಿವಾರದವರೊಂದಿಗೆ ಬಹಿರಂಗವಾಗಿ ಕೈ ಜೋಡಿಸುತ್ತಿರುವುದು ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನದ ವ್ಯವಸ್ಥೆಗೆ ಮಾಡುವ ದ್ರೋಹ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಆದುದರಿಂದ ಮುಸ್ಲಿಮ್ ಸಮುದಾಯ ನಕಲಿ ಸೆಕ್ಯುಲರ್ ಮುಖಂಡರುಗಳ ಮೇಲೆ ಭರವಸೆ ಇಡದೆ, ತಮ್ಮೊಳಗೆ ಏಕತೆಯನ್ನು ಕಾಪಾಡಿಕೊಂಡು ನ್ಯಾಯ, ಹಕ್ಕುಗಳನ್ನು ಸಂಘಟಿತ ಹೋರಾಟದ ಮೂಲಕ ಪಡೆಯುವ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.