ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್‌ಗಳು ವಿಫಲವಾಗಿದೆ: ಮಲ್ಲಿಕಾರ್ಜುನ ಖರ್ಗೆ

Prasthutha|

ಆಳಂದ: ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್‌ಗಳು ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

- Advertisement -


ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿಯರಿಗೆ ದೊಡ್ಡ ಯೋಜನೆಗಳನ್ನು ತಂದು ಗೊತ್ತಿಲ್ಲ. ಧರ್ಮ ಧರ್ಮದೊಂದಿಗೆ ಬಡ ಜನರೊಳಗಡೆ ಬಿಜೆಪಿಗರು ಜಗಳ ಮಾಡಿಸುತ್ತಿದ್ದಾರೆ. ಮಾತು ಎತ್ತಿದ್ದರೆ ಹಿಂದೂ ಮುಸ್ಮಲ್ಮಾನ್ ಅಂತ ಹೇಳಿ ಸಾಮರಸ್ಯವನ್ನು ಕೆಡವಿ ಮತ ಧ್ರುವೀಕರಣ ಮಾಡೋದೆ ಬಿಜೆಪಿಯ ಕೆಲಸ. ಎಲ್ಲಿ ಶಾಂತಿ ಇರುತ್ತೊ ಅಲ್ಲಿ ಅಶಾಂತಿ ಮಾಡುವ ಪ್ರವತ್ತಿ ಬಿಜೆಪಿಯವರದ್ದು ಎಂದು ಅವರು ಕಿಡಿಕಾರಿದ್ದಾರೆ.

ಇಂದು ಕರ್ನಾಟಕದಲ್ಲಿ ಯಾವುದೇ ಕೆಲಸಕ್ಕೆ ಲಂಚ ಕೊಡದೇ ಕೆಲಸ ಆಗುವುದಿಲ್ಲ. ಏಕೆಂದರೆ 40% ಕಮಿಷನ್ ಕೊಟ್ರೆ ಎಲ್ಲ ಕೆಲಸ ಆಗುತ್ತದೆ ಅನ್ನುವಂತಹದ್ದು ಜಗಜ್ಜಾಹೀರಾಗಿದೆ. ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದು ಕಳುಹಿಸಿದ್ದಾರೆ, ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೋದಿ ಅವರೇ..ನೀವು ಲಂಚ ಪಡೆಯುತ್ತಿರುವವರ ಜೊತೆಗೆ ಓಡಾಡ್ತಿದ್ದೀರಿ, ಹೊಗಳುತ್ತಿದ್ದೀರಿ, ನಾ ಖಾವೂಂಗ ನಾ ಖಾನೇದೂಂಗಾ ಎನ್ನುವ ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.