ಬೆಂಗಳೂರು: ಏಕಕಾಲದಲ್ಲಿ ಸಿಮ್ ಗೆ ಅನುಸಾರವಾಗಿ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್ ಸೌಂಡ್ ಬಂದಿದೆ. ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೊಬೈಲ್ ಗೂ ಬೀಪ್ ಶಬ್ದದ ಜೊತೆ ಅಲರ್ಟ್ ಮೆಸೇಜ್ ಬಂದಿದೆ.
ಇಂದು ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ ಬಂದಿದೆ. ಡಿಕೆಶಿ ಮೊಬೈಲ್ ಸೇರಿ ಏಕಕಾಲಕ್ಕೆ ಹತ್ತಾರು ಮೊಬೈಲ್ ಗಳು ಸದ್ದು ಮಾಡಿವೆ. ಏಕಕಾಲಕ್ಕೆ ಹತ್ತಾರು ಮೊಬೈಲ್ ಗಳು ಸದ್ದು ಮಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಕೆಲಕಾಲ ಗಲಿಬಿಲಿಗೊಂಡರು. ಆಗ ಮಾಧ್ಯಮಪ್ರತಿನಿಧಿಗಳು, ಈ ಶಬ್ದ ವಿಕೋಪ ಮಾಹಿತಿ ಅಲಾರ್ಮ್ ಎಂದು ತಿಳಿಸಿದ್ದು ಕಾಂಗ್ರೆಸ್ ನಾಯಕರು ನಿಟ್ಟುಸಿರುಬಿಟ್ಟರು. ಈ ವೇಳೆ ಭಾಷಣ ಮಾಡುತ್ತಿದ್ದ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗುವ ಮೂಲಕ ಟಾಂಗ್ ಕೊಟ್ಟಿದ್ದಾರೆ.