ಆಳಂದ ನಿಷೇಧಾಜ್ಞೆ ಉಲ್ಲಂಘನೆ: ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಎಫ್ ಐಆರ್ ದಾಖಲು, ಸಂಘಪರಿವಾರದವರ ವಿರುದ್ಧ ಕೇಸ್ ಇಲ್ಲ !

Prasthutha|

ಕಲಬುರಗಿ: ಆಳಂದದಲ್ಲಿ ಮಾರ್ಚ್ 1 ರಂದು ಲಾಡ್ಲೆ ಮಶಾಖ್ ದರ್ಗಾದಲ್ಲಿರುವ ಶಿವಲಿಂಗದ ‘ಶುದ್ಧೀಕರಣ ಪೂಜೆ’ಯ ಹೆಸರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆಳಂದ ಪೊಲೀಸರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರ ವಿರುದ್ಧ ಮಾತ್ರ ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಎಫ್ ಐಆರ್ ಗಳಲ್ಲಿ ಯಾವುದೇ ಬಲಪಂಥೀಯ ಸಂಘಟನೆಯ ಸದಸ್ಯರನ್ನು ಹೆಸರಿಸಲಾಗಿಲ್ಲ. 167 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮತ್ತು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ (ಆಳಂದ) ಮಂಜುನಾಥ್ ಎಸ್ ತಿಳಿಸಿದ್ದಾರೆ.

144 ಸೆಕ್ಷನ್ ಉಲ್ಲಂಘಿಸಿದವರಲ್ಲಿ ಎರಡೂ ಸಮುದಾಯದ ಮುಖಂಡರು ಮತ್ತು ಸದಸ್ಯರು ಇದ್ದರು. ಆದರೆ ಕೇವಲ ಮುಸ್ಲಿಮರ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ದಾಖಲಿಸುವಲ್ಲಿಯೂ ತಾರತಮ್ಯವೆಸಗಲಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ.

- Advertisement -

ಆದಾಗ್ಯೂ, ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ ಪಿಸಿ) ಸೆಕ್ಷನ್ 200ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಸಿಆರ್ ಪಿಸಿಯ ಸೆಕ್ಷನ್ 188ರ ಅಡಿಯಲ್ಲಿ ಮುಸ್ಲಿಮ್ ಸಮುದಾಯ ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಗೆ ಎರಡು ವರದಿಗಳನ್ನು ಸಲ್ಲಿಸಿದ್ದಾರೆ. ಆದರೆ ಅದರ ಅನುಷ್ಠಾನವಾಗಲಿದೆಯೇ ಎಂಬ ಸಂಶಯವನ್ನು ಹಲವು ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕರ ನೇತೃತ್ವದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಪ್ರವೇಶಿಸಿ ರಾಘವ ಚೈತನ್ಯಲಿಂಗದಕ್ಕೆ ಶುದ್ಧೀಕರಣ ಪೂಜೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು. ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಗುಂಪಿನಲ್ಲಿದ್ದ ಕೆಲ ಸದಸ್ಯರು ಕಲ್ಲು ತೂರಾಟ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಹಾಯಕ ಆಯುಕ್ತರ ವಾಹನಗಳಿಗೆ ಹಾನಿಯಾಗಿದೆ.

ದರ್ಗಾ ಆವರಣದಲ್ಲಿ ಪೂಜೆ ಸಲ್ಲಿಸಲು ಸಂಘಪರಿವಾರದ  ಕಾರ್ಯಕರ್ತರು ನಡೆಸಿದ ಪ್ರಯತ್ನವನ್ನು ವಿರೋಧಿಸಿ ಮುಸ್ಲಿಮರು ಕೂಡ ದರ್ಗಾ ಬಳಿ ಜಮಾಯಿಸಿದ್ದರು. ಉದ್ವಿಗ್ನತೆಯನ್ನು ತಡೆಗಟ್ಟಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆಳಂದದಲ್ಲಿ ಮಾರ್ಚ್ 5 ರವರೆಗೆ ಸಿಆರ್ ಪಿಸಿ ಯ ಸೆಕ್ಷನ್ 144 ರ ಅಡಿಯಲ್ಲಿ ಹೊಸ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Join Whatsapp