ಪಾಟ್ನ, ಜು.29: ವಾರಣಾಸಿ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಹಾರದ ಸಚಿವ ಸಹಾನಿ ಅವರಿಗೆ ನಿರ್ಬಂಧ ವಿಧಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಕ್ರಮವನ್ನು ಬಿಹಾರದ ಎಐಎಂಐಎಂ ಪಕ್ಷದ ನಾಯಕ ಅಖ್ತರುಲ್ ಇಮಾಮ್ ತೀವ್ರವಾಗಿ ಟೀಕಿಸಿದ್ದಾರೆ.
ಸಹಾನಿಯವರು ಬಿಹಾರ ಸರಕಾರದಲ್ಲಿ ಮಂತ್ರಿ, ಪಕ್ಕದ ರಾಜ್ಯದ ಮಂತ್ರಿಯನ್ನು ಯೋಗಿ ಆದಿತ್ಯನಾಥ ಸರಕಾರವು ಹೀಗೆ ನಡೆಸಿಕೊಂಡುದು ಸರಿಯಲ್ಲ. ಈ ಘಟನೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಸ್ಪೀಕರ್ ವಿಜಯ ಸಿನ್ಹಾ ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಇಮಾಮ್ ಒತ್ತಾಯಿಸಿದ್ದಾರೆ.
ಬಿಹಾರ ವಿಧಾನ ಸಭೆಯಲ್ಲಿ ಇಮಾಮ್ ಅವರು ತಮ್ಮ ಪಕ್ಷದ ಇತರು ನಾಲ್ವರು ಶಾಸಕರೊಂದಿಗೆ ಕೂಡಿ ಈ ವಿಚಾರವನ್ನು ಸದನದಲ್ಲಿ ಚರ್ಚಿಸುವಂತೆ ಒತ್ತಾಯ ಮಾಡಿದರು. ಅಲ್ಲದೆ ಸ್ಪೀಕರ್ ಅವರು ಒಂದು ಖಂಡನಾ ನಿರ್ಣಯ ಸ್ವೀಕರಿಸಬೇಕು ಎಂದು ಕೂಡ ಅವರು ಒತ್ತಾಯಿಸಿದರು. ಬಿಹಾರದ ಸಚಿವರೊಬ್ಬರನ್ನು ಯೋಗಿ ಆದಿತ್ಯನಾಥರ ಸರಕಾರವು ನಡೆಸಿಕೊಂಡಿರುವ ವಿಧಾನವು ತುಂಬ ಕೆಟ್ಟ ಉದಾಹರಣೆಯಾಗಿದೆ ಎಂದು ಇಮಾನ್ ಸದನದಲ್ಲಿ ಒತ್ತಿ ಹೇಳಿದರು. ಖಂಡನಾ ನಿರ್ಣಯ ತೆಗೆದುಕೊಳ್ಳುವಂತೆ ಎಐಎಂಐಎಂ ಸದಸ್ಯರು ಮಾಡಿದ ಒತ್ತಾಯವನ್ನು ಸ್ಪೀಕರ್ ವಿಜಯ ಸಿನ್ಹಾ ತಳ್ಳಿ ಹಾಕಿದಾಗ ಸದರಿ ಸದಸ್ಯರು ವಿಧಾನ ಸಭೆಯಲ್ಲಿ ಘೋಷಣೆ ಕೂಗಿದರು. ಸ್ವಲ್ಪ ಕಲ ವಿಧಾನಸಭೆಯಲ್ಲಿ ಗದ್ದಲ ಮನೆ ಮಾಡಿತು.
ಉತ್ತರ ಪ್ರದೇಶದ 18 ವಿಭಾಗಗಳಲ್ಲಿ ಮಾಜಿ ಡಕಾಯಿತ ರಾಣಿ, ಕೊಲೆಯಾದ ಸಂಸದೆ ಪೂಲನ್ ದೇವಿಯವರ ಪ್ರತಿಮೆ ಸ್ಥಾಪನೆ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾನಿಯವರು ವಾರಣಾಸಿಗೆ ಬಂದಿದ್ದರು. ಇದು ರಾಜಕೀಯ ನಡೆ ಎಂದ ಉತ್ತರ ಪ್ರದೇಶ ಸರಕಾರವು ಸಹಾನಿಯವರನ್ನು ವಾರಣಾಸಿ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡಲಿಲ್ಲ.
2020ರ ಬಿಹಾರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಎಐಎಂಐಎಂ ಉತ್ತರ ಪ್ರದೇಶದಲ್ಲೂ ತನ್ನ ರಾಜಕೀಯ ಪಾರಮ್ಯ ಬೆಳೆಸಿಕೊಳ್ಳಲು ಬಯಸಿದೆ.