ಕೇಂದ್ರ ಸರ್ಕಾರ ಕಾರ್ಮಿಕರ ಕುರಿತು ಅಸಡ್ಡೆ ಮನೋಭಾವ ಹೊಂದಿದೆ: ಮಲ್ಲಿಕಾರ್ಜುನ ಖರ್ಗೆ

Prasthutha|

► ‘ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳಬೇಕು’

- Advertisement -

ಬೆಂಗಳೂರು: ಕೇಂದ್ರ ಸರ್ಕಾರ ಕಾರ್ಮಿಕರ ಕುರಿತು ಅಸಡ್ಡೆ ಮನೋಭಾವ ಹೊಂದಿದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾರ್ಮಿಕರ ಬಗ್ಗೆ, ಅವರ ಆದಾಯದ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಚಿಂತೆ ಇಲ್ಲ. ಕನಿಷ್ಠ ಕೂಲಿ ಕಾಯ್ದೆ ಜಾರಿ ಮಾಡುತ್ತಿಲ್ಲ. ಗುತ್ತಿಗೆ ನೌಕರಿ, ದಿನಕೂಲಿ ನೌಕರಿಗೆ ಅನುಮತಿ ಕೊಡಲಾಗುತ್ತಿದೆ. ಈ ಸರ್ಕಾರ ಕಾರ್ಮಿಕರ ಕುರಿತು ಅಸಡ್ಡೆ ಮನೋಭಾವ ಹೊಂದಿದೆ. ಕಾರ್ಮಿಕರ ಆದಾಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಯಾಕೆ ಸರ್ಕಾರ ಕಾರ್ಮಿಕರ ಜೀವನದ ಮೇಲೆ ಚೆಲ್ಲಾಟ ನಡೆಸುತ್ತಿದೆ. ಅವರ ಹಣವನ್ನು ಷೇರು ಮಾರುಕಟ್ಟೆಗೆ ಹಾಕಲಾಗುತ್ತಿದೆ. ಅದು ಅವರ ಬೆವರಿನ ದುಡ್ಡು. ಷೇರು ಮಾರುಕಟ್ಟೆ ಕುಸಿದರೆ ಯಾರು ಹೊಣೆ? ಈವರೆಗೆ ಕೇಂದ್ರ ಜಾರಿಗೆ ತಂದ ನಾಲ್ಕು ಕಾನೂನುಗಳು ಶ್ರಮಿಕರಿಗೆ ವಿರೋಧವಾಗಿದೆ. ಇದು ಖಂಡನಾರ್ಹ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬೇಕು. ಇದರ ವಿರುದ್ಧ ಸಂಸತ್ತಿನಲ್ಲಿ ಹೋರಾಟ ಮಾಡಿದ್ದೆವು. ಆದರೆ ಸರ್ಕಾರ ವಾಪಸ್ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕೇಂದ್ರ ಸರ್ಕಾರ ಶ್ರೀಮಂತರ ಹಾಗೂ ಉದ್ಯಮಿಗಳ ಪರವಾಗಿ ಕಾನೂನು ಮಾಡುತ್ತಿದೆ. ಕಾರ್ಮಿಕರ ವಿರೋಧಿ ಕಾನೂನುಗಳನ್ನು ಸರ್ಕಾರ ರಚಿಸಬಾರದು. ಆಧುನಿಕ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಪರಿಣಾಮ ಶ್ರಮಿಕರ ಆರೋಗ್ಯಕ್ಕೆ ಪರಿಣಾಮ ಆಗುವುದರಿಂದ ಅಂತಹ ಕಾನೂನನ್ನು ತೆಗೆಯಬಾರದು. ಅಂಬೇಡ್ಕರ್‌ 1942 ನಲ್ಲಿ ವೈಸ್ರೈಯ್‌ ಲೇಬರ್‌ ಸಮಿತಿಯಲ್ಲಿದ್ದಾಗ ಕಾರ್ಮಿಕರ ಪರ ಹೋರಾಟ ಮಾಡಿದ್ರು. ಅದು ಮುಂದುವರೆದು ಕಾರ್ಮಿಕರ ಕೆಲಸದ 8 ತಾಸುಗಳ ಅವಧಿ ವಿಚಾರವಾಗಿ ಬ್ರಿಟಿಷ್ ಕಾನೂನು ವಾಪಸ್ ತರುವಂತೆ ಅಂದು ಹೋರಾಟ ಮಾಡಿದ್ದರು.

ದೇಶದಲ್ಲಿ ಶ್ರಮಿಕ ವರ್ಗಕ್ಕೆ ಹೆಚ್ಚಿನ ಸಹಾಯ ಮಾಡೋಕೆ 12 ತಾಸು ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಶ್ರಮಿಕ ವರ್ಗದ ಕೆಲಸ ಅವಧಿ ಹೆಚ್ಚಳ ಮಾಡಲಾಗಿದೆ. ನಮ್ಮಲ್ಲಿ ಇನೂ ಮಹಿಳೆಯರಿಗೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಮಹಿಳಾ ಸುರಕ್ಷತೆ ಕಾರಣಕ್ಕಾಗಿ ಈ‌ ಹಿಂದೆ ಇದಕ್ಕೆ ಅವಕಾಶ ಇರಲಿಲ್ಲ. ಇಂದು ಒತ್ತಾಯದಿಂದ ಇಂದು ಇಂತಹ ಕಾನೂನನ್ನು ಸರ್ಕಾರ ತರುತ್ತಾ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬಂಡಾವಳಶಾಹಿ ಶ್ರೀಮಂತರ ಆದಾಯ ದೇಶದಲ್ಲಿರುವ 3000 ಸಾವಿರ ಮುನ್ನಲೆಯಲ್ಲಿರುವ ಶ್ರೀಮಂತರ ಆದಾಯ ಶೇ. 70ರಷ್ಟು ಅಭಿವೃದ್ಧಿ ಆಗಿದೆ. ಆದರೆ ಶ್ರಮಿಕರ ವೇತನ ಶೇ 5 ರಷ್ಟು ಮಾತ್ರ ಹೆಚ್ಚಾಗಿದೆ.  ಸರ್ಕಾರದ ಒಲವು ಯಾರ ಪರ ಅಂತ ನಿಮಗೆ ಇದರಲ್ಲಿ ಗೊತ್ತಾಗುತ್ತದೆ. ಬಡಜನರ ಮತ್ತು ಬಡ ಶ್ರಮಿಕರ ಪರವಾಗಿ ಇರುವ ಪ್ರಗತಿಪರ ಕಾನೂನನ್ನು ಬಿಜೆಪಿ ರಾಜ್ಯಸರ್ಕಾರ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರದ ಆದೇಶ ಪಾಲನೆ ರಾಜ್ಯದಲ್ಲಿ ಮಾಡಲಾಗುತ್ತಿದೆ‌. ಮೋದಿ ಗೆರೆಯನ್ನು ದಾಟಲ್ಲ, ಆಯ್ದ ಬಂಡವಾಳ ಶಾಹಿಗಳ ಮಾತನ್ನು ಕೇಳಿ ಪ್ರಧಾನಿ ಮೋದಿ ಈ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಶ್ರಮಿಕರ ಕೂಗು, ಅಳಲನ್ನು ತೋಡಿಕೊಳ್ಳಲು ಅವಕಾಶನೇ ಈ ಸರ್ಕಾರ ಕೊಡಲ್ಲ. ಇಂತಹ ಕಾನೂನು 4 ಕೆಟ್ಟ ಕಾನೂನುಗಳನ್ನು ತೆಗೆದು ಹಾಕಬೇಕು. ರಾಜಸ್ತಾನದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕಾರ್ಮಿಕ ವಿರೋಧೀ ಕಾನೂನುನ್ನು ಒಪ್ಪಿಕೊಂಡಿಲ್ಲ ಮತ್ತೇ ಜಾರಿ ಕೂಡ ಮಾಡಿಲ್ಲ. ಮೊದಲು ಯಾವ ರೀತಿ ಇತ್ತೋ ಅದೇ ರೀತಿಯಲ್ಲಿ ಮುಂದುವರೆಯಬೇಕೆಂದು ಅವರು ಆಗ್ರಹಿಸಿದರು.

ನಾನು ಕಾರ್ಮಿಕ ಸಚಿವನಾಗಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ತಂದಿದ್ದೇವೆ, ಶ್ರಮಿಕರಿಗೆ ಇಎಸ್‌ ಐ ಆಸ್ಪತ್ರೆ, ಸಾಮಾಜಿಕ ಭದ್ರತೆ, ಸ್ವಾಸ್ಥ್‌ ಬೀಮಾ ಯೋಜನೆ, ಕಾರ್ಮಿಕರ ಪರ ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ಅನೇಕ ಕಾರ್ಯಕ್ರಮದ ಬಗ್ಗೆ ಇಡೀ ದೇಶಾಧ್ಯಂತ ಜನರಿಗೆ ಉಪಯುಕ್ತವಾಗಲು ಎನ್‌ ಜಿಓ ಗಳ ಸಹಕಾರದಿಂದ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಶ್ರಮಿಕರಿಗೆ ನೆರವಾಗಿದ್ದೆವು. ನಾವು ಅಧಿಕಾರದಲ್ಲಿದ್ದಾಗ ಅನೇಕ ಕಾರ್ಮಿಕರ ಸಂಘಟನೆಗಳು ಪ್ರತಿಭಟನೆ, ಏನಾದರೂ ನಮ್ಮಲ್ಲಿ ತಪ್ಪುಗಳು ಕಂಡುಬಂದಾಗ ಪ್ರಶ್ನಿಸುತ್ತಿದ್ದವು ಆದರೆ ಇಂದು ಕಾರ್ಮಿಕ ಸಂಘಟನೆಗಳು ಕೂಡ ಪ್ರಶ್ನೆ ಮಾಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾಜ, ದೇಶ ಒಡೆಯವುದು ಬಿಜೆಪಿ ಉದ್ದೇಶವಾಗಿದೆ. ಸಮಾಜವನ್ನು ಉದ್ದಾರವನ್ನು ಮಾಡುವ ಕೆಲಸ ಬಿಜೆಪಿ ಎಂದಿಗೂ ಮಾಡಲ್ಲ.  ಬಿಜೆಪಿ ಪ್ರಣಾಳಿಕೆಯಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿ ಭರವಸೆ ಕೇವಲ ಸಮಾಜ ಒಡೆಯುವ ಮತ್ತು ದೇಶ ಒಡೆಯವುದು ಅವರ ಉದ್ದೇಶ. ಸಮಾಜದ ಉದ್ದಾರ ಮಾಡುವ ಕೆಲಸ ಬಿಜೆಪಿಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.