ವಿಧಾನಸಭಾ ಚುನಾವಣೆಗೆ AIADMK ಮೈತ್ರಿಕೂಟವು ಸೀಟು ಹಂಚಿಕೆ ಆರಂಭಿಸಿದೆ. ತಮಿಳುನಾಡಿನ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ 20 ಸೀಟು ಮತ್ತು ಪ್ರಾದೇಶಿಕ ಪಕ್ಷ PMKಗೆ 23 ಸೀಟು ಹಂಚಿಕೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸೀಟು ಹಂಚಿಕೆ ಒಪ್ಪಂದಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಸಿ.ಟಿ ರವಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸಹಿ ಹಾಕಿದ್ದಾರೆ. AIADMK ಮೈತ್ರಿಕೂಟದ ಮತ್ತೊಂದು ಮೈತ್ರಿ ಪಕ್ಷ ನಟ ವಿಜಯಕಾಂತ್‌ರವರ DMDK ಗೆ ಇನ್ನೂ ಸೀಟು ಹಂಚಿಕೆ ನಿಗಧಿಪಡಿಸಿಲ್ಲ ಎನ್ನಲಾಗಿದೆ.
AIADMK ಮೈತ್ರಿಕೂಟವು ಕಳೆದ ಲೋಕಸಭಾ ಚುನಾವಣೆ ವೇಳೆ 39 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 38 ಕ್ಷೇತ್ರಗಳಲ್ಲಿ ಪರಾಭವಗೊಂಡು ಭಾರೀ ಹಿನ್ನಡೆ ಅನುಭವಿಸಿತ್ತು. ಇದರಲ್ಲಿ ಬಿಜೆಪಿಯು 5 ಸ್ಥಾನಗಳಲ್ಲಿ ಸ್ಪರ್ಧಿಸಿ 5 ರಲ್ಲಿಯೂ ಸೋಲನ್ನು ಅನುಭವಿಸಿತ್ತು.
ಡಿಎಂಕೆಯು ಕಾಂಗ್ರೆಸ್ ಕೇವಲ 20 ಸ್ಥಾನಗಳನ್ನು ಮಾತ್ರ ನೀಡಬಲ್ಲೆವು ಎಂದು ಹೇಳಿದೆ. ಮೊದಲಿಗೆ 18 ಸ್ಥಾನ ನೀಡುವುದಾಗಿ ಹೇಳಿದ್ದ ಡಿಎಂಕೆ ಮಾತುಕತೆಗಳ ನಂತರ 20 ಸ್ಥಾನದ ಆಫರ್ ಮಾಡಿದೆ. ಆದರೆ ಕಾಂಗ್ರೆಸ್ ಕನಿಷ್ಠ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ.
ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮನ್ನಣೆ ಇಲ್ಲ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಇಲ್ಲಿ ಪ್ರಾದೇಶಿಕ ಪಕ್ಷಗಳದ್ದೆ ಕಾರುಬಾರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಿಗೂ ಕೇವಲ ತಲಾ 20 ಸ್ಥಾನಗಳಷ್ಟೇ ನೀಡಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.