ಮುಸ್ಲಿಂ ಶಾಸಕಿಯ ಭೇಟಿ ಬಳಿಕ ದೇವಾಲಯ ಶುದ್ಧಿ; ದೂರು ನೀಡಿದರೆ ಕ್ರಮ: ಸುಜಿತ್ ಕುಮಾರ್ ರೈ

Prasthutha|

ಉತ್ತರಪ್ರದೇಶ: ಸಿದ್ಧಾರ್ಥ್ ನಗರ ಜಿಲ್ಲೆಯ ದೇವಸ್ಥಾನವೊಂದಕ್ಕೆ ಶಾಸಕಿಯ ಭೇಟಿಯ ನಂತರ ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಗಂಗಾಜಲ ಎರಚಿ ಶುಚಿಗೊಳಿಸಿದ ಘಟನೆ ನಿನ್ನೆ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗದೇ ಇದ್ದು, ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡೊಮರಿಯಾಗಂಜ್ ಸರ್ಕಲ್ ಆಫೀಸರ್ ಸುಜಿತ್ ಕುಮಾರ್ ರೈ ಹೇಳಿದ್ದಾರೆ.

- Advertisement -

ನಾವು ಘಟನೆಯ ಬಗ್ಗೆ ವಿವರಣೆ ತೆಗೆದುಕೊಂಡು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ಧಾರ್ಥ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

ಡೊಮರಿಯಾಗಂಜ್ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕಿ ಸೈಯಾದಾ ಖಾತೂನ್ ಸಿದ್ಧಾರ್ಥ್ ನಗರ ಜಿಲ್ಲೆಯ ಬಲ್ವಾ ಗ್ರಾಮದ ಸಮ್ಯ ಮಾತಾ ದೇವಸ್ಥಾನಕ್ಕೆ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಹೋಗಿದ್ದರು. ಮರುದಿನ ಹಿಂದುತ್ವ ಸಂಘಟನೆಗಳು ಮತ್ತು ಸ್ಥಳೀಯ ಪಂಚಾಯತ್‌ ಸದಸ್ಯರು ದೇವಸ್ಥಾನಕ್ಕೆ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ನಡೆಸಿ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾರೆ. ಅಲ್ಲದೆ ದೇವಸ್ಥಾನಕ್ಕೆ ಅನುದಾನ ಕೊಡಿಸಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದ ಶಾಸಕಿಯ ವಿರುದ್ಧ ಘೋಷಣೆಗಳನ್ನು ಕೂಗಿ ಅತಿರೇಕವೆಸಗಿದ್ದಾರೆ.

- Advertisement -

ಈ ವರ್ತನೆಯನ್ನು ಬರ್ಹ್ನಿ ಚಾಫಾ ನಗರ ಪಂಚಾಯತ್‌ ಅಧ್ಯಕ್ಷ ಧರ್ಮರಾಜ್ ವರ್ಮಾ ಸಮರ್ಥಿಸಿದ್ದಾರೆ. ಸಮ್ಯ ಮಾತಾ ಮಂದಿರವು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಸ್ಥಳೀಯ ಶಾಸಕರು ದೇವಾಲಯಕ್ಕೆ ಅಗೌರವ ತೋರಿದ್ದಾರೆ. ಅವರು ಮಾಂಸಾಹಾರಿ ಮತ್ತು ಅವರ ಭೇಟಿಯು ಸ್ಥಳದ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ಶಾಸಕಿ ಖಾತೂನ್, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಮೇಲಾಗಿ ನಾನು ಸಾರ್ವಜನಿಕ ಪ್ರತಿನಿಧಿ. ಅದು ದೇವಸ್ಥಾನವಾಗಲಿ ಅಥವಾ ಮಸೀದಿಯಾಗಲಿ, ನನ್ನನ್ನು ಆಹ್ವಾನಿಸಿದರೆ ನಾನು ಖಂಡಿತವಾಗಿಯೂ ಅಲ್ಲಿಗೆ ಹೋಗುತ್ತೇನೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

Join Whatsapp