ಪರಿಸ್ಥಿತಿ ಕೈ ಮೀರಿದ ಮೇಲೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ : ಡಿಕೆಶಿ ಆಕ್ರೋಶ

Prasthutha|

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಚರ್ಚೆಗಾಗಿ ಸಿಎಂ ಯಡಿಯೂರಪ್ಪ ಸರ್ವಪಕ್ಷ ನಾಯಕರ ಸಭೆ ಕರೆದಿರುವುದು ದೊಡ್ಡ ವಿಚಾರವೇನಲ್ಲ. ಈಗ ಸಮಯ ಮೀರಿ ಹೋದ ಮೇಲೆ ಸಿಎಂ ಸರ್ವಪಕ್ಷ ನಾಯಕರ ಸಭೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕೋವಿಡ್ ಸಭೆ ಎನ್ನುವುದು ನನ್ನೊಬ್ಬನ ವಿಚಾರವೇನಲ್ಲ. ಇದು ರಾಜ್ಯದ ವಿಚಾರವೂ ಹೌದು. ಸರ್ಕಾರ ಇಲ್ಲಿಯವರೆಗೆ ಕೋವಿಡ್ ಕುರಿತ ನಮ್ಮ ಯಾವುದೇ  ಸಲಹೆಗಳನ್ನು ಪರಿಗಣಿಸಲಿಲ್ಲ. ನಮ್ಮ ಯಾವುದೇ ಒಂದೂ ಮಾತನ್ನೂ ಕೇಳಲಿಲ್ಲ ಎಂದು ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಹೇಳಿದ್ದಾರೆ. ಸರ್ಕಾರ ತನ್ನ ಇಷ್ಟ ಬಂದಂತೆ ನಡೆದುಕೊಂಡಿದೆ. ಈಗ ಪರಿಸ್ಥಿತಿ ಕೈ ಮೀರಿ ಹೋಗಿರುವಾಗ ಸಭೆ ಕರೆದಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಜನ ಈಗಾಗಲೇ ಸಂಕಷ್ಟದಲ್ಲಿರುವುದರಿಂದ ಲಾಕ್ಡೌನ್ ಅವಶ್ಯಕತೆಯಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಇದು ಜೀವ‌ ಮತ್ತು ಜೀವನದ ಪ್ರಶ್ನೆಯಾಗಿರುವುದರಿಂದ ಕೋವಿಡ್ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿ. ಜನರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ನೆರವಾಗಲಿ ಎಂದು ಡಿಕೆಶಿ ಈ ವೇಳೆ ಸಲಹೆ ನೀಡಿದ್ದಾರೆ.

Join Whatsapp