ನವದೆಹಲಿ: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 9 ವರ್ಷಗಳಿಂದ ಜೈಲಿನಲ್ಲಿದ್ದು, ಕ್ಯಾನ್ಸರ್ ಕಾರಣ ನೀಡಿ ಜಾಮೀನಿನಿಂದ ಹೊರಬಂದಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಟ ಆಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಠಾಕೂರ್ ಗರ್ಬಾ ನೃತ್ಯ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು.
ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ಪ್ರಜ್ಞಾ ಸಿಂಗ್ ಹಲವು ಬಾರಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ವೇಳೆ ಅವರು ಅನಾರೋಗ್ಯದ ಕಾರಣಗಳನ್ನು ನೀಡುತ್ತಿದ್ದರು.
ಕೇಸರಿ ವಸ್ತ್ರದಾರಿಯಾಗಿ ಸಂಸದೆ ತಮ್ಮ ಕ್ಷೇತ್ರವಾದ ಮಧ್ಯಪ್ರದೇಶದ ಭೋಪಾಲ್ ನ ಮೈದಾನದಲ್ಲಿ ಮಹಿಳಾ ಆಟಗಾರರೊಂದಿಗೆ ಒಂದು ಸುತ್ತಿನ ಕಬಡ್ಡಿ ಆಟ ಆಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಬುಧವಾರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಆಟಗಾರರು ತಮ್ಮೊಂದಿಗೆ ಆಟವಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸದೆ ಕಬಡ್ಡಿ ಆಟದಲ್ಲಿ ತಲ್ಲೀನರಾದರು.
ಸಂಸದೆಯ ಮುಂದಿನ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ನ್ಯಾಯಾಲಯದಲ್ಲಿ ಯಾವಾಗ ನಡೆಸುತ್ತದೆ ಎಂದು ಕಾಂಗ್ರೆಸ್ ನಾಯಕ ಬಿ.ವಿ ಶ್ರೀನಿವಾಸ್ ವ್ಯಂಗವಾಡಿದರು.
ಕೋವಿಡ್ 19 ಲಸಿಕೆಯನ್ನು ಪಡೆದಾಗ ಸಂಸದೆ ನೃತ್ಯ ಮತ್ತು ಬಾಸ್ಕೆಟ್ ಬಾಲ್ ಆಡುವ ವೀಡಿಯೋ ವೈರಲ್ ಆದ ಬಗ್ಗೆ ಕಾಂಗ್ರೆಸ್ ಪದೇ ಪದೇ ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತಲೇ ಬಂದಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ನಿಂದ ಬಂಧಿತರಾಗಿದ್ದ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆಗೊಳಿಸಿತ್ತು.
ಪ್ರಜ್ಞಾ ಠಾಕೂರ್ ಅವರು 2017 ರಲ್ಲಿ ಜಾಮೀನು ಪಡೆಯುವ ಮೊದಲು 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು.