ಮುಂಬೈ: ರಾಜಸ್ಥಾನ ಸರಕಾರ ಜೈಲುಗಳಲ್ಲಿ ಜಾತಿ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಬದಲಾಯಿಸಿದೆ. ಬಿಹಾರ ಮೂಲದ ದಲಿತ ಯುವಕನಿಂದ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸಿದ ಸುದ್ದಿಯೊಂದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿ ಜಾತಿ ತಾರತಮ್ಯ ದೊಡ್ಡ ವಿವಾದವಾಗಿತ್ತು. 70 ವರ್ಷಗಳಿಂದ ಜೈಲುಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ಬಗ್ಗೆ ಆನ್‌ಲೈನ್ ನ್ಯೂಸ್ ಪೋರ್ಟಲ್ ‘ದಿ ವೈರ್’ ಹೊರ ಜಗತ್ತಿಗೆ ಬಹಿರಂಗಪಡಿಸಿತ್ತು.
ದಿ ವೈರ್ ವರದಿಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದ ರಾಜಸ್ಥಾನ್ ಹೈಕೋರ್ಟ್‌ನ ಜೋಧ್‌ಪುರ ನ್ಯಾಯಪೀಠ ಜೈಲು ಕೈಪಿಡಿಯಲ್ಲಿ ಬದಲಾವಣೆ ಮಾಡಲು ಆದೇಶಿಸಿತ್ತು. ಇದರೊಂದಿಗೆ ರಾಜ್ಯ ಗೃಹ ಇಲಾಖೆ ಜೈಲು ಕೈಪಿಡಿಯನ್ನು ಬದಲಾಯಿಸಿದೆ. ರಾಜಸ್ಥಾನ ಜೈಲುಗಳಲ್ಲಿನ ಜಾತಿ ತಾರತಮ್ಯದ ವರದಿಯನ್ನು ದಿ ವೈರ್ ನ್ಯೂಸ್ ಪೋರ್ಟಲ್ ಡಿಸೆಂಬರ್ 10 ರಂದು ಬಿಡುಗಡೆ ಮಾಡಿತ್ತು. ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಚಗೊಳಿಸುವುದು ಸೇರಿದಂತೆ ಶುಚೀಕರಣ ಕಾರ್ಯದ ಉಸ್ತುವಾರಿ ದಲಿತರಿಗೆ ಕೊಡಲಾಗುತ್ತಿತ್ತು. ಅಡುಗೆಯಂತಹ ಉದ್ಯೋಗಗಳನ್ನು ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯವರಿಗೆ ನೀಡಲಾಗುತ್ತಿತ್ತು. ಜೈಲು ಕೈದಿಗಳ ಸಾಂಪ್ರದಾಯಿಕ ಉದ್ಯೋಗ ಮತ್ತು ಜಾತಿಯ ಪ್ರಕಾರ ಉದ್ಯೋಗಗಳನ್ನು ವರ್ಗೀಕರಿಸಲಾಗುತ್ತಿತ್ತು.
ಜೈಲಿನಲ್ಲಿ ಕೈದಿಗಳನ್ನು ಜಾತಿಯ ಆಧಾರದ ಮೇಲೆ ಕಿರುಕುಳ ಕೊಡುವುದು ಸಾಮಾನ್ಯವಾಗಿ ಬಿಟ್ಟಿತ್ತು. ಬಿಹಾರದ ಕೈದಿಯ ಅನುಭವವನ್ನು ‘ದಿ ವೈರ್’ ವರದಿಯಲ್ಲಿ ಉಲ್ಲೇಖಿಸಿದೆ. ತನ್ನ 97 ದಿನಗಳ ಜೈಲು ವಾಸದ ನಂತರ ಸೆಪ್ಟಿಕ್ ಟ್ಯಾಂಕ್‌ಗೆ ಇಳಿಯಲು ಒತ್ತಾಯಿಸಲಾಯಿತು ಎಂದು ಬಿಹಾರಿ ಯುವಕ ಹೇಳಿದ್ದಾನೆ. ತಾನು ‘ರಜಕ್’ ಜಾತಿಗೆ ಸೇರಿದವನಾಗಿರುವುದರಿಂದ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಚಗೊಳಿಸಲು ಒತ್ತಾಯಿಸಲಾಗಿತ್ತು ಎಂದು ಯುವಕ ಹೇಳಿದ್ದಾನೆ.